ಕುಂದಾಪುರ, ಫೆ 29 (DaijiworldNews/HR): 1 ಕೋಟಿ 20 ಲಕ್ಷ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುತ್ತಾರೆ. ಅಂತಹಾ ಅದ್ಭುತ ದೇವರುಗಳ ಸೇವೆ ಮಾಡುವ ಸೇವೆ ಮಾಡುವ ಭಾಗ್ಯ ನನಗೆ ಒದಗಿ ಬಂದಿದ್ದಕ್ಕೆ ಹೆಮ್ಮೆಯಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟರೆ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದ ಹಾಗೇ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದರೆ ದೇವರು ನಮಗೆ ಉತ್ತಮವಾದ ವರ ನೀಡುತ್ತಾರೆ ಎಂದು ಭಾವಿಸುತ್ತೇನೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಗುರುವಾರ ಬೈಂದೂರು ತಾಲೂಕಿನ ನಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ಥಾನಿ ನಾಗೂರು ಇಲ್ಲಿನ ಸುವರ್ಣ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನವೇ ನಮಗೆ ಧರ್ಮ ಗ್ರಂಥವಾಗಬೇಕು. ಹುಟ್ಟಿದ್ದು ಯಾವುದೇ ಜಾತಿ ಧರ್ಮವಿರಬಹುದು. ಆದರೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತಕ್ಕೆ ಇರುವುದು ಒಂದೇ ಧರ್ಮ ಗ್ರಂಥ. ಅದುವೇ ಮಾನವೀಯ ಮೌಲ್ಯಗಳನ್ನು ಸಾರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಬಿಟ್ಟುಹೋದ ಸಂವಿಧಾನ. ಅದರ ಆಧಾರದಡಿಯಲ್ಲಿ ನಾವೆಲ್ಲರೂ ದೇಶದ ಉತ್ತಮ ಪ್ರಜೆಗಳಾಗಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿದಾಗ ಮಾತ್ರ ಸಂವಿಧಾನದ ಸದಾಶಯ ಈಡೇರುತ್ತದೆ ಎಂದರು.
ಇದೇ ಸಂದರ್ಭ 100 ಲಕ್ಷ ಮೌಲ್ಯದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು. ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಚಿವ ಮಧು ಬಂಗಾರಪ್ಪ ಅವರನ್ನೂ ಶಾಲು ಹೊದೆಸಿ ಸನ್ಮಾನಿಸಲಾಯಿತು. ಈ ಸಂದರ್ಭ ಐದು ಲಕ್ಷ ರೂಪಾಯಿಗಳ ಕುಟುಂಬ ಅಪಘಾತ ವಿಮಾ ಚೆಕ್ಕನ್ನು ಬಿಡುಗಡೆಗೊಳಿಸಲಾಯಿತು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೆಖರ್ ಖಾರ್ವಿ ದ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಸುಬ್ಬಣ್ಣ ಶೆಟ್ಟಿ ಪುರಮೆರವಣಿಗೆ ಚಾಲನೆ ನೀಡಿದರು.
ಉಡುಪಿ ಜಿಲ್ಲಾ ಡಿಡಿಪಿಐ ಗಣಪತಿ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ. ನಾಯ್ಕ್, ಜಿಲ್ಲಾ ಪಂಚಾಯತ್ ಮಾಜೀ ಅಧ್ಯಕ್ಷ ರಾಜು ಪುಜಾರಿ, ತಾ.ಪಂ ಮಾಜೀ ಸದಸ್ಯೆ ಶಾಮಲ ಕುಂದರ್ ಜಿ.ಪಂ.ಮಾಜೀ ಸದಸ್ಯೆ ಗೌರಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಪುರಮೆರವಣಿಗೆಯ ಬಳಿಕ ಸಚಿವ ಮಧು ಬಂಗಾರಪ್ಪ ಮಕ್ಕಳಿಗೆ ಸ್ವತಃ ಚಾಕಲೇಟ್ ನೀಡಿದರು.