ಮಂಗಳೂರು, ಫೆ 28(DaijiworldNews/AA): ದೇಶದಲ್ಲಿ ಮೌಲ್ಯಯುತ, ಸಂಸ್ಕಾರ, ಸಂಸ್ಕೃತಿ ಬೆಸೆಯುವ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಇದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ. ದ.ಕ. ಜಿಲ್ಲೆ ಶಿಕ್ಷಣ ಕಾಶಿಯೆಂದು ಹೆಸರುವಾಸಿಯಾಗಲು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಾತ್ರ ಅಪಾರವಾಗಿದೆ. ಇದೀಗ ಸಂತ ಅಲೋಶಿಯಸ್ ಶಿಕ್ಷಣ ಪರಿಗಣಿತ ವಿಶ್ವವಿದ್ಯಾನಿಲಯ ಎಂಬ ಪದವಿ ಪಡೆದುಕೊಂಡಿದ್ದು ಇಡೀ ಜಿಲ್ಲೆಯ ಜನರೇ ಹೆಮ್ಮೆಪಡುವಂತಾಗಿದೆ. ನನ್ನ ಲೋಕ ಸಭಾ ಸದಸ್ಯತನದ ಕಾಲಾವಧಿಯಲ್ಲಿ ಈ ಕಾಲೇಜಿಗೆ ಪರಿಗಣಿತ ವಿಶ್ವವಿದ್ಯಾನಿಲಯ ಪದವಿ ದೊರಕಿದ್ದು ನನಗೆ ಅತ್ಯಂತ ಸಂತಸ ಹಾಗೂ ಅಭಿಮಾನದ ಸಂಗತಿಯಾಗಿದೆ. 140 ವರ್ಷಗಳ ಇತಿಹಾಸದಲ್ಲಿ ಸಂತ ಅಲೋಶಿಯಸ್ ಕಾಲೇಜು ಅನೇಕ ಸಾಧಕರನ್ನು ಈ ದೇಶಕ್ಕೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಬುಧವಾರ ಸಂಜೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಪರಿಗಣಿತ ವಿಶ್ವವಿದ್ಯಾಲಯದ ಅಧಿಕೃತ ಘೋಷಣೆ ಹಾಗೂ ಸಂಭ್ರಮಾಚರಣೆಯ ಲೋಗೋ ಅನಾವರಣ ಮಾಡಿ ಮಾತನಾಡುತ್ತಿದ್ದರು.
ಸಂತ ಅಲೋಶಿಯಸ್ ಮಂಗಳೂರಿನ ಇತಿಹಾಸದಲ್ಲಿ ೫ನೇ ಪರಿಗಣಿತ ಯುನಿವರ್ಸಿಟಿಯಾಗಿದ್ದು, ಈ ಸಂಸ್ಥೆಯು ಜಿಲ್ಲೆಯ ಶಿಕ್ಷಣಕ್ಕೆ ನೀಡಿರುವ ಸಾರ್ಥಕ ಸೇವೆಯನ್ನು ಸಾರುತ್ತಿದೆ. ಈ ಪದವಿಯು ಹಲವು ವರ್ಷದ ಪ್ರಯತ್ನಕ್ಕೆ ಸಂದ ಫಲವಾಗಿದೆ. ಈ ಕನಸು ನನಸಾಗಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಪೂರ್ಣ ಸಹಕಾರ ನೀಡಿರುವುದು ಸ್ಮರಣೀಯ. ಇಲ್ಲಿನ ಬೋಧಕ ವರ್ಗವು ಅತ್ಯಂತ ನೈಪುಣ್ಯತೆಯನ್ನು ಹೊಂದಿದವರಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸದಲ್ಲಿ ಪ್ರಾಮಾಣಿಕ ಶ್ರಮ ವಹಿಸುತ್ತಿದ್ದಾರೆ. ಭಗವಂತನ ಪ್ರೇರಣೆಯಿಂದ ಶತಮಾನದ ಕನಸು ನನಸಾಗಿದೆ ಎಂದರು.
ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ಫಾ| ಡೈನೀಶಿಯಸ್ ವಾಸ್ ಎಸ್. ಜೆ. ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ| ಫ್ರಾನ್ಸಿಸ್ ಸೆರಾವೊ, ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರಿನ ವಿಶ್ರಾಂತ ಬಿಷಪ್ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ, ಗುಲ್ಬರ್ಗಾ ಧರ್ಮಪ್ರಾಂತ್ಯದ ಬಿಷಪ್ ಡಾ| ರಾಬರ್ಟ್ ಮಿರಾಂದ, ಫಾ| ಗೋಮ್ಸ್, ಸ್ಥಳೀಯ ಕಾರ್ಪೊರೇಟರ್ ವಿನಯ್ ರಾಜ್ ಶುಭ ಹಾರೈಸಿದರು. ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ| ಮೆಲ್ವಿನ್ ಪಿಂಟೊ ಎಸ್.ಜೆ. ಸ್ವಾಗತಿಸಿದರು. ಉಪ ಕುಲಪತಿ ಫಾ| ಪ್ರವೀಣ್ ಮಾರ್ಟಿಸ್ ವಂದಿಸಿದರು.