ಕಾರ್ಕಳ, ಫೆ 28 (DaijiworldNews/HR): ಹೆಚ್ಚಿದ ಬಿಸಿಲಿನ ತಾಪದ ನಡುವೆ ಬಿಸಿಯೂಟ ತಯಾರಿಸಲು ಅಡುಗೆ ಅನಿಲ ಖಾಲಿಯಾಗಿದೆ ಎಂಬ ಕಾರಣವೊಡ್ಡಿ ಮದ್ಯಾಹ್ನ 2 ಗಂಟೆಯ ಹೊತ್ತಿಗೆ ಬಿಸಿಲಿನ ತಾಪದ ನಡುವೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿರುವ ಘಟನೆ ಕಾರ್ಕಳದ ದುರ್ಗ ಗ್ರಾಮದಲ್ಲಿ ನಡೆದಿದೆ.
1ರಿಂದ 5ನೇ ತರಗತಿಯಲ್ಲಿ ಒಟ್ಟು 8 ಮಂದಿ ವಿದ್ಯಾ ರ್ಥಿಗಳು ಇದ್ದಾರೆ. ಖಾಯಂ ಶಿಕ್ಷಕರ ಕೊರತೆ ಇಲ್ಲಿ ಖಾಯಂ ಆಗಿರುವುದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಪ್ರಸಕ್ತ ಸಾಲಿನಲ್ಲಿ ಕೇವಲ 8 ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ರಾಜ್ಯ ಸರಕಾರವು ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಿದ್ದು, ಅದರಂತೆ ಆ ಯೋಜನೆಯೂ ಕಾರ್ಕಳ ದುರ್ಗ ಗ್ರಾಮದ ಮಲೆಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಜಾರಿಯಲ್ಲಿದೆ.
ಫೆ. 28 ಬುಧವಾರದಂದು ದುರ್ಗ ಮಲೆಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆಯ ಅನಿಲದ ಸಿಲಿಂಡರ್ ಖಾಲಿಯಾಗಿದೆ ಎಂಬ ನೆಪದಲ್ಲಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಿಲ್ಲ. ಬದಲಾಗಿ ಹೋಟೆಲ್ ನಿಂದ ತರಿಸಿದ 8 ಬನ್ಸ್ ಗಳನ್ನು 8 ವಿದ್ಯಾರ್ಥಿ ಗಳಿಗೆ ನೀಡಿ, ಮಧ್ಯಾಹ್ನ 2ಗಂಟೆಗೆ ಸುಡುಬಿಸಿಲಿನಲ್ಲಿ ಪುಟಾಣಿ ವಿದ್ಯಾರ್ಥಿಳನ್ನು ಮನೆಗೆ ಕಳುಹಿಸಿದ್ದಾರೆಂಬ ಆರೋಪವು ಕೇಳಿಬಂದಿದೆ.
ಮಧ್ಯಾಹ್ನದ ಬಿಸಿ ಊಟ ತಯಾರಿಸಲು ಶಾಲೆಗಳಿಗೆ 2 ಅಡುಗೆ ಅನಿಲದ ಸಿಲಿಂಡರ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಿದ್ದರೂ ಅನಿಲ ಅಡುಗೆಯ ಸಿಲಿಂಡರ್ ನೆಪವೊಡ್ಡಿ ಬಿಸಿಯೂಟ ತಯಾರಿಸದೇ ಇರುವುದು ಸಮಂಜಸವಲ್ಲ. ಏನೇ ಕಾರಣಗಳು ಇರಲಿ. ವರದಿ ತಯಾರಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.