ಉಡುಪಿ, ಫೆ 28(DaijiworldNews/MS): ಹಠಾತ್ ಹೃದಯಾಘಾತದಿಂದ ಫೆ.22ರಂದು ಮುರುಡೇಶ್ವರದಲ್ಲಿ ನಿಧನರಾದ ರಷ್ಯಾದ ಪ್ರವಾಸಿ ಅಲೆಕ್ಸಾಂಡರ್ (73) ಅವರ ಅಂತಿಮ ಸಂಸ್ಕಾರವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇಂದು ನೆರವೇರಿಸಿದ್ದಾರೆ.
ಮೃತದೇಹವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಘಟನೆ ಕುರಿತು ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರಿಗೆ ಸಾಧ್ಯವಾಗಿರಲಿಲ್ಲ. ಮೃತರ ಮಗಳ ಕೋರಿಕೆಯ ಮೇರೆಗೆ ಅಲೆಕ್ಸಾಂಡರ್ ಅವರ ಪಾರ್ಥಿವ ಶರೀರವನ್ನು ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಸಮಾರಂಭದಲ್ಲಿ ಮುರ್ಡೇಶ್ವರ ಪೊಲೀಸ್ ಉಪನಿರೀಕ್ಷಕ ಶಿವಕುಮಾರ್ ಎಸ್.ಆರ್, ಪೊಲೀಸ್ ಸಿಬ್ಬಂದಿ ಮುರಳಿ ಎಂ ನಾಯಕ್, ವಿಜಯ್ ನಾಯಕ್, ಮಂಜು ಮಡಿವಾಳ, ವಿಯಾಕ್ಸ್ ಶೆಟ್ಟಿ, ವಿಶು ಉಪಸ್ಥಿತರಿದ್ದರು.
ಈ ಹಿಂದೆ ಉಡುಪಿಯಲ್ಲಿ ನಿತ್ಯಾನಂದ ಒಳಕಾಡು ಅವರು ಶ್ರೀಲಂಕಾ ಪ್ರಜೆಯ ಅಂತ್ಯಸಂಸ್ಕಾರ ನೆರವೇರಿಸಿದ್ದರು.