ಮಂಗಳೂರು, ಎ28(Daijiworld News/SS): ತಣ್ಣೀರುಬಾವಿ ಬೀಚ್ ಬಳಿ ಅಪರೂಪದ ಕಡಲಾಮೆ (ಆಲಿವ್ ರಿಡ್ಲಿ ಸೀ ಟರ್ಟಲ್) ಬೋಟ್ ಇಂಜಿನ್ನ ಬ್ಲೇಡ್ ತಾಗಿ ಸಾವನ್ನಪ್ಪಿದ ಘಟನೆಯೊಂದು ವರದಿಯಾಗಿದೆ.
ಸುಮಾರು 10 ಕೆ.ಜಿ. ತೂಕವಿದ್ದ 4 ತಿಂಗಳು ಪ್ರಾಯದ ಅಪರೂಪದ ಆಮೆ ಮರಿಯ ಗಟ್ಟಿ ಚಿಪ್ಪುವಿನ ಮೇಲೆ ಬೋಟ್ ಇಂಜಿನ್ನ ಬ್ಲೇಡ್ ತಾಗಿ ಗಾಯಗಳಾಗಿತ್ತು. ಮಾತ್ರವಲ್ಲ, ಆಮೆಯ ಮರಿಯ ಮೈ ಪೂರ್ತಿ ಬಲೆ ಸಂಪೂರ್ಣ ಸುತ್ತಿಕೊಂಡು ಅದರಿಂದ ಬಿಡಿಸಲಾಗದೆ ಸಾವನ್ನಪ್ಪಿದೆ ಎನ್ನಲಾಗಿದೆ.
ಈ ಬಗ್ಗೆ ತಣ್ಣೀರುಬಾವಿ ಕಡಲಕಿನಾರೆಯ ಲೈಫ್ಗಾರ್ಡ್ ಕುಮಾರ್ ಎಂಬುವರು ಪ್ರಾಣಿ ಸಂರಕ್ಷಕ ತೌಸಿಫ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ತೌಸಿಫ್ ಆಮೆಯನ್ನು ನೀರಿನಿಂದ ಮೇಲೆತ್ತಿದ್ದರು. ಬಲೆ ಸಂಪೂರ್ಣ ಸುತ್ತಿಕೊಂಡು ಆಮೆಯ ಮೈ ಪೂರ್ತಿ ಗಾಯವಾಗಿತ್ತು. ಚಿಪ್ಪು ಒಡೆದ ಕಾರಣ, ಆಮೆ ಸಾವನ್ನಪ್ಪಿದೆ ಎಂದು ತೌಸಿಫ್ ತಿಳಿಸಿದ್ದಾರೆ.
ಮಾತ್ರವಲ್ಲ, ಪ್ರಾಣಿ ಸಂರಕ್ಷಕ ತೌಸಿಫ್ ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆ ಶ್ರೀಧರ್ ಅವರ ಸಹಕಾರದೊಂದಿಗೆ ಪೋಸ್ಟ್ ಮಾರ್ಟಂ ಮಾಡಿದ್ದಾರೆ.
ಈ ಕುರಿತು ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯಿಸಿದ ತೌಸೀಫ್, ಆಲಿವ್ ರಿಡ್ಲಿ ಸೀ ಟರ್ಟಲ್ ಮಂಗಳೂರಿನಲ್ಲಿ ಕಾಣಸಿಗುವುದು ತೀರಾ ವಿರಳ. ಎಲ್ಲಿ ಸಮುದ್ರದ ನೀರು ಶುದ್ಧವಾಗಿರುತ್ತದೆಯೋ ಅಲ್ಲಿ ಇದು ಹೆಚ್ಚಾಗಿ ವಾಸಿಸುತ್ತದೆ. ನೀರು ಶುದ್ಧವಾಗಿರುವ ಕಡೆ ಮಾತ್ರ ಇದು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ ಎಂದು ಹೇಳಿದರು.
ಸುಮಾರು 2 ವರುಷದ ಹಿಂದೆ ಈ ಜಾತಿಯ ಆಮೆ ಮಂಗಳೂರಿನಲ್ಲಿ ಕಾಣಸಿಕ್ಕಿತ್ತು. ಕಾರ್ಖಾನೆಗಳು ಹೆಚ್ಚಾಗಿರುವುದರಿಂದ ಕರಾವಳಿಯ ಸಮುದ್ರ ಮಲಿನವಾಗಿದೆ. ಕೊಳಚೆ ನೀರು, ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ. ಪರಿಣಾಮ, ಕಡಲಾಮೆ ಕರಾವಳಿ ತೀರಕ್ಕೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.