ಉಡುಪಿ, ಎ28(Daijiworld News/SS): ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳಾ ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬೈಂದೂರು ರೈಲ್ವೇ ನಿಲ್ದಾಣಕ್ಕೆ ಸಮೀಪದ ಕಂಬದ ಕೋಣೆಯಲ್ಲಿ ರೈಲು ಹಾದು ಹೋಗುವಾಗ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮುಂಬೈನಿಂದ ಎರ್ನಾಕುಲಂಗೆ ತೆರಳುತ್ತಿದ್ದ ನಿಝಾಮುದ್ದೀನ್ ಎಕ್ಸ್ಪ್ರೆಸ್ (ಕ್ರಮಸಂಖ್ಯೆ 12618) ರೈಲಿನಲ್ಲಿ ಈ ಅವಘಡ ಸಂಭವಿಸಿದೆ. ತಡರಾತ್ರಿ 1:20ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ಭಾರೀ ಅಪಾಯ ತಪ್ಪಿದೆ.
ಕುಂದಾಪುರ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಮಹಿಳಾ ಪ್ರಯಾಣಿಕೆಯೊಬ್ಬರು ಇದನ್ನು ಗಮನಿಸಿ ತಕ್ಷಣ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿ ಹತ್ತಿದ ಬೋಗಿಯನ್ನು ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಕೇರಳದ ಎರ್ನಾಕುಲಂಗೆ ರೈಲನ್ನು ಕಳುಹಿಸಲಾಗಿದ್ದು, ಸುರಕ್ಷಿತವಾಗಿ ಪ್ರಯಾಣಿಕರು ಎರ್ನಾಕುಲಂ ತಲುಪಿದ್ದಾರೆ. ಎಸಿ ಬೋಗಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಈ ಬೆಂಕಿ ಅವಘಢ ಸಂಭವಿಸಿದೆ ಎನ್ನಲಾಗಿದೆ.