ಮಂಗಳೂರು, ಫೆ 27 (DaijiworldNews/HR): ಲೋಕೋಪಯೋಗಿ ಇಲಾಖೆಯಿಂದ 2024ನೇ ಸಾಲಿನಲ್ಲಿ ರಸ್ತೆ ಸಂಚಾರ ಸಮೀಕ್ಷೆ ಫೆಬ್ರವರಿ 29 ರಂದು ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 2, ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ 2 ದಿನಗಳ ಕಾಲ ರಾಜ್ಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಸಮೀಕ್ಷೆಗೆ ಸುಮಾರು 124 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ.
ಈ ಸಮೀಕ್ಷೆಯ ಮುಖ್ಯ ಉದ್ದೇಶವೇನೆಂದರೆ, ವಾಹನ ಸಂಚಾರದ ಬೆಳವಣಿಗೆ ತೀವ್ರತೆಯನ್ನು ಗಮನಿಸಿ ರಸ್ತೆಗಳ ಮೇಲ್ಮೈಯನ್ನು ಅಭಿವೃದ್ಧಿ ಪಡಿಸುವುದು, ರಸ್ತೆಗಳನ್ನು ಅಗಲಪಡಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಇವೇ ಮೊದಲಾದ ಹಲವಾರು ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರವು ರೂಪಿಸಲು ಮತ್ತು ಕೈಗೆತ್ತಿಗೊಳ್ಳಲು ಅನುಕೂಲವಾಗುವುದು.
ವಾಹನ ಸಂಚಾರ ವಿವರಗಳನ್ನು ಸಂಗ್ರಹಿಸಲು ಜಿಲ್ಲೆಯ 124 ಗಣತಿ ಕೇಂದ್ರಗಳಲ್ಲಿ ಸಹಾಯಕ ಇಂಜಿನಿಯರ್ / ಕಿರಿಯ ಇಂಜಿನಿಯರ್ಗಳನ್ನು ನೇಮಿಸಲಾಗಿದೆ. ಈ ವಾಹನ ಸಂಚಾರದ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮಂಗಳೂರು ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.