ಮಂಗಳೂರು, ಎ28(Daijiworld News/SS): ನಗರದಲ್ಲಿ ಈ ಬಾರಿ ನೀರಿನ ಸಮಸ್ಯೆಯಾಗಿರುವ ಹಿನ್ನೆಲೆ, ತುಂಬೆ ವೆಂಟೆಡ್ ಡ್ಯಾಂಗೆ ಸಚಿವ ಯುಟಿ ಖಾದರ್ ಭೇಟಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಡ್ಯಾಂನ ನೀರಿನ ಮಟ್ಟ ವೀಕ್ಷಿಸಿದ ಸಚಿವ ಖಾದರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರಿನ ಜನತೆಗೆ ಯಾವುದೇ ಕಾರಣಕ್ಕೂ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮಾತ್ರವಲ್ಲ, ದ.ಕ ಜಿಲ್ಲಾಡಳಿತ ಮತ್ತು ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಾಲೂಕು ಮಟ್ಟದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ನೀಡಲಾಗುವುದು, ಜನರಿಗೆ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕ್ರಮ ಕೈಗೊಳ್ಳಲಾಗುವುದು. ನೀತಿ ಸಂಹಿತೆ ಇರುವುದರಿಂದ ನಮ್ಮ ಕಾರ್ಯ ವಿಳಂಬವಾಗುತ್ತಿದೆ. ಟ್ಯಾಂಕರ್ ಮೂಲಕ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕರಾವಳಿಯಲ್ಲಿ ಉತ್ತಮ ಮಳೆಯಾಗಬೇಕೆಂದು ಜನರು ಪ್ರಾರ್ಥಿಸಬೇಕು. ಕಳೆದ ಬಾರಿ ನಡೆದ ಹಾಗೆ ಈ ಬಾರಿಯೂ ಪ್ರಕೃತಿ ವಿಕೋಪ ಆಗುವ ಸಾಧ್ಯತೆ ಇದೆ. ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತದಿಂದ ಸೂಕ್ತ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈಗಾಗಲೇ ಮಂಗಳೂರಿನ ಮುಳುಗಡೆ ಪ್ರದೇಶಗಳನ್ನು ಗುರುತಿಸಿದ್ದೇವೆ. ಮಡಿಕೇರಿ, ಸಂಪಾಜೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಗೆ ಎನ್ ಡಿ ಆರ್ ಎಫ್ ಪಡೆ ಆಗಮಿಸುತ್ತದೆ. ಕಳೆದ ಬಾರಿ ಮಡಿಕೇರಿಯಲ್ಲಿ ಅವಘಡ ಉಂಟಾಗಿತ್ತು. ಸಂಪಾಜೆ ಭಾಗದ ಜನರಿಗೆ ಜಾಗೃತೆಯಿಂದ ಇರಲು ಸೂಚನೆ ನೀಡಲಾಗಿದೆ ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ.