ಸುಳ್ಯ, ಎ28(Daijiworld News/SS): ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೆಯ ಅಂಗವಾಗಿ ಅಡ್ಡಣಪೆಟ್ಟು ಆಚರಣೆ ನಡೆದಿದೆ. ಕರ್ನಾಟಕ- ಕೇರಳದ ಗಡಿ ಭಾಗದಿಂದ ಭಕ್ತರು ಆಗಮಿಸಿ ಈ ವಿಶಿಷ್ಟ ಆಚರಣೆಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ತುಳುನಾಡಿನ ಸಂಸ್ಕೃತಿ, ಆಚರಣೆ, ನಂಬಿಕೆಗಳೆಂದರೆ ಬೇರೆಡೆಗಿಂತ ಕೊಂಚ ವಿಭಿನ್ನ. ತುಳುನಾಡು ತನ್ನದೇ ಆದ ವೈಶಿಷ್ಟಗಳನ್ನು ಪಡೆದುಕೊಂಡ ಸಂಪದ್ಭರಿತ ಪ್ರದೇಶ. ವಿಶಿಷ್ಟ ಜಾನಪದ ನಂಬಿಕೆಗಳ ಹಾಗು ಕಲೆಗಳ ತವರುಮನೆ. ತುಳುನಾಡಿನ ಆಚಾರ ವಿಚಾರಗಳು ಬೇರೆಲ್ಲೂ ಸಿಗದು. ತುಳುನಾಡಿನ ಜಾನಪದ ಸಂಪ್ರದಾಯಗಳಲ್ಲಿ ಭೂತಾರಾಧನೆ ಅತ್ಯಂತ ಮಹತ್ವದ ಆಚರಣೆ ಎನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ವಿಶಿಷ್ಟ ಹೊಡೆದಾಟ ಸಂಪ್ರದಾಯವೊಂದು ಚಾಲ್ತಿಯಲ್ಲಿದೆ. ಜಾತ್ರೋತ್ಸವದ ಪ್ರಯುಕ್ತ ನಡೆಯುವ ಉಳ್ಳಾಕುಲು ದೈವದ ನೇಮದ ಸಂದರ್ಭ ನಾಲ್ಕೂರಿನ ಪ್ರತಿನಿಧಿಗಳ ನಡುವೆ ಹೊಡೆದಾಟ ನಡೆಯುತ್ತದೆ.
ಅಡ್ಡಣ ಪೆಟ್ಟು ಎಂದೇ ಪ್ರಸಿದ್ಧಿ ಪಡೆದಿರುವ ಈ ಆಚರಣೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ, ನೇಮೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮಂಡೆಕೋಲು ಜಾತ್ರೆಯಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ.
ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ ಅಡ್ಡಣ ಪೆಟ್ಟು ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.
ಮಂಡೆಕೋಲು ದೇವಸ್ಥಾನಕ್ಕೆ ಸೇರಿದ ಕೇನಾಜೆ-ಮಾವಜಿ, ಮುರೂರು-ಬೊಳುಗಲ್ಲಿನ ನಾಲ್ವರು ಗೌಡ ಮನೆತನದ ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ ಹಿಡಿದು ಹೊಡೆದಾಟ ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಬೆನ್ನು ಹಾಕಿ ನಿಂತ ದೈವ ಹೊಡೆದಾಟದ ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಿ ಸಂಧಾನ ನಡೆಸುತ್ತದೆ.