ಉಡುಪಿ, ಫೆ 26 (DaijiworldNews/HR): ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತ್ರತ್ವದ ಸರಕಾರ ಪತನವಾಗಲಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಹತಾಶೆಯ ಪರಮವಾಧಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿ ಜನರ ಮನ್ನಣೆಗೆ ಪಾತ್ರವಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಾಗದ ಸಚಿವೆ ಇಲ್ಲಸಲ್ಲದ ಹೇಳಿಕೆಗಳ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಿಸುವುದರ ಮೂಲಕ ರಾಜ್ಯದ ಜನತೆ ಬಿಜೆಪಿಗೆ ಸೂಕ್ತ ಪಾಠ ಕಲಿಸಲಿದ್ದಾರೆ. ಸೂಕ್ತ ಸಂಖ್ಯಾಬಲದೊಂದಿಗೆ ರಾಜ್ಯ ಸರಕಾರ ಅಧಿಕಾರ ನಡೆಸುತ್ತಿದ್ದು, ಈ ಬಾರಿ ಆಪರೇಶನ್ ಕಮಲ ನಡೆಸಲು ಹೊರಟರೆ ಇದಕ್ಕೆ ಬಗ್ಗುವ ನಾಯಕರು ಯಾರೂ ಇಲ್ಲ. ನೇರವಾಗಿ ಎದುರಿಸಲು ಸಾಧ್ಯವಾಗದ ಬಿಜೆಪಿಗರು ಆಪರೇಶನ್ ಕಮಲದಂತಹ ವಾಮ ಮಾರ್ಗಗಳನ್ನು ಹುಡುಕುವುದರಲ್ಲಿ ನಿಸ್ಸೀಮರು ಎನ್ನುವುದು ಜಗತ್ತಿಗೆ ತಿಳಿದ ವಿಚಾರವಾಗಿದೆ ಎಂದರು.
ಇನ್ನು ಕಾಂಗ್ರೆಸ್ ಸರಕಾರ ಪತನದ ಚಿಂತೆ ಮಾಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆಯವರು ಮೊದಲು ತಮ್ಮ ಸ್ಥಾನವನ್ನು ಭದ್ರಪಡಿಸುವ ಪರಿಸ್ಥಿತಿ ಎದುರಾಗಿದೆ ಎನ್ನುವುದನ್ನು ಮರೆಯದಿರಲಿ. ಅವರ ಪಕ್ಷದ ಕಾರ್ಯಕರ್ತರಿಗೆ ಧ್ವನಿಯಾಗಬೇಕಾಗಿದ್ದು ಸಂಸದೆ ಕೈಗೆ ಸಿಗದೆ ಇರುವುದರಿಂದ ನೊಂದಿರುವ ಸಹಸ್ರಾರು ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ದೂರು ನೀಡಿರುವುದು ಅವರ ಕಾರ್ಯಕರ್ತರಿಗೆ ಎಷ್ಟೊಂದು ನೋವು ನೀಡಿದ್ದಾರೆ ಎನ್ನುವುದು ತೋರಿಸುತ್ತದೆ. ಈಗಾಗಲೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಯುತ್ತಿದ್ದು ಅವರ ಪಕ್ಷದ ಕಾರ್ಯಕರ್ತರಿಂದ ಎನ್ನುವುದು ಅವರು ತಿಳಿದಿರಲಿ ಎಂದಿದ್ದಾರೆ.
ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಲು ವಿಫಲರಾಗಿರುವ ಶೋಭಾ ಕರಂದ್ಲಾಜೆ ಅವರ ವಿರುದ್ದ ಇಂತಹ ಅಭಿಯಾನ ನಡೆಯುತ್ತಿರುವುದು ಸರಿಯಾಗಿ ಇದೆ. ಮಲ್ಪೆ ರಾಷ್ಟ್ರೀಯ ಹೆದ್ದಾರಿ, ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿ ಸೇತುವೆ ಇಂತಹ ಹತ್ತು ಹಲವು ಸಮಸ್ಯೆಗಳಿಂದ ಜನರನ್ನು ಎದುರಿಸಲು ಸಾಧ್ಯವಾಗದ ಅವರ ಕಾರ್ಯಕರ್ತರು ಗೋ ಬ್ಯಾಕ್ ಚಳುವಳಿ ನಡೆಸುತ್ತಿದ್ದಾರೆ ಇದನ್ನು ಸರಿ ಮಾಡಬೇಕಾಗಿರುವ ಸಂಸದೆಯವರು ರಾಜ್ಯ ಸರಕಾರದ ವಿರುದ್ದ ಮಾತನಾಡುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ.