ಕುಂದಾಪುರ, ಫೆ 25(DaijiworldNews/MS): ಕುಂದಾಪುರ ತಾಲೂಕಿನ ತಲ್ಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃವಂದನಾ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಾಯಂದಿರ ಪಾದ ತೊಳೆದು, ತಾಯಿಯ ಪಾದಗಳಿಗೆ ಅರಿಶಿಣ ಕುಂಕುಮ ಹಚ್ಚಿ ದೀಪ ಬೆಳಗಿ ಪಾದ ಪೂಜೆ ನಡೆಸಲಾಯಿತು.
ಕಾರ್ಯಕ್ರಮದ ಪ್ರದಾನ ಭಾಷಣಕಾರರಾದ ದಾಮೋದರ ಶರ್ಮ ಮಾತನಾಡುತ್ತಾ, ತಾಯಿಯಾದವರಿಗೆ ಮಹತ್ತರವಾದ ಜವಾಬ್ಧಾರಿಯಿದೆ. ತಾಯಿ ತಂದೆಗಳ ನಡೆಯೇ ಮಕ್ಕಳ ಬೆಳವಣಿಗೆಯ ಹಾದಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಪೋಷಕರು ಮಾದರಿಯಾಗಬೇಕು ಎಂದು ಹೇಳಿದರು. ಮಕ್ಕಳನ್ನು ಬೇರೆಯವರ ಜೊತೆ ಹೋಲಿಸಬೇಡಿ ಎಂದ ಅವರು, ಬದುಕನ್ನು ನಿರ್ಭಿಡೆಯಿಂದ ಬದುಕುವ ಸವಾಲನ್ನು ಎದುರಿಸುವ ಸ್ಥೈರ್ಯವನ್ನು ಮಕ್ಕಳಲ್ಲಿ ಹೆಚ್ಚಿಸುವುದೇ ಪೋಷಕರ ಜವಾಬ್ಧಾರಿ ಎಂದರು.
ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕರ ವತಿಯಿಂದ ಮಾತೃವಂದನಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯ್ಕ್ ಅಧ್ಯಕ್ಷತೆ, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಉದಯಕುಮಾರ್ ತಲ್ಲೂರು, ಶಾಲಾ ಮುಖ್ಯೋಪಾದ್ಯಾಯಿನಿ ಪಾರ್ವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಕೀಲ ಟಿ.ಬಿ.ಶೆಟ್ಟಿ, ತಲ್ಲೂರು ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು