ಕುಂದಾಪುರ, ಫೆ 25(DaijiworldNews/MS): ದೇಶದಲ್ಲಿ 18 ಕೋಟಿ ಸದಸ್ಯತ್ವವನ್ನು ಹೊಂದಿರುವ ಬಿಜೆಪಿ ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂದು ನೆಹರೂ ಮಾಡಿದ ತಪ್ಪಿಗೆ ಇಂದು ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಸಂಸತ್ತಿನ ವೀಕ್ಷಕ ಗ್ಯಾಲರಿಯಲ್ಲಿ ಕೂರುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೆಂದ್ರ ಹೇಳಿದ್ದಾರೆ.
ಬೈಂದೂರು ತಾಲುಕಿನ ನಾಡದಲ್ಲಿ "ಗಾಂವ್ ಚಲೋ" ಅಭಿಯಾನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೆಂದ್ರ ಸರ್ಕಾರ ರೈತರಿಗೆ ಕೃಷಿ ಸಮ್ಮಾನ್ ಯೋಜನೆ, ಪ್ರತೀ ವರ್ಷ 2 ಲಕ್ಷ ಕೋಟಿ ಗೊಬ್ಬರ ಸಬ್ಸಿಡಿ, ಜನಧನ್ ಖಾತೆ ಮೂಲ ನೇರ ಹಣ ವರ್ಗಾವಣೆ ಸೌಲಭ್ಯ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸೌಲಭ್ಯ ಹೀಗೇ ನೂರಾರು ಕಾರ್ಯಕ್ರಮ ಜ್ಯಾರಿಗೆ ತಂದಿದ್ದಾರೆ. ಈಗಾಗಲೇ ತೀರ್ಥಹಳ್ಳಿ – ಆಗುಂಬೆ ಸಂಪರ್ಕಕ್ಕೆ ಸುರಂಗ ಮಾರ್ಗ ಚಿಂತನೆ ನಡೆದಿದ್ದು, ಪ್ರಸ್ತಾವನೆ ಸಿದ್ಧಗೊಳ್ಳುತ್ತಿದೆ ಎಂದರು. ಭಾರತ ಈ ಹಿಂದೆ ಆರ್ಥಿಕ ಸ್ಥಿತಿಯಲ್ಲಿ 30ನೇ ಸ್ಥಾನದಲ್ಲಿದ್ದು, ಮೋದಿ ಆಡಳಿತದ 9 ವರ್ಷದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ಮುಂದಿನ ಅವಧಿಯಲ್ಲಿ 3 ನೇ ಸ್ಥಾನಕ್ಕೆ ಏರಲಿದೆ ಎಂದರು.ವಿಮಾನ ನಿಲ್ದಾಣಗಳ ಸಂಕ್ಯೆ ದುಪ್ಪಟ್ಟಾಗಿವೆ. 40 ಸಾವಿರ ರೈಲು ಬೋಗಿಗಳು ವಂದೇ ಮಾತರಂ ದರ್ಜೆಗೇರಲಿವೆ ಎಂದರು.
ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಿಶೋರ್ ಕುಮಾರ್, ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ, ಸಂಚಾಲಕ ಮಹೇಂದ್ರ ಪೂಜಾರಿ, ಸಹ ಸಂಚಾಲಕ ಸಾಮ್ರಾಟ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಉಪಸ್ಥಿತರಿದ್ದರು. ಅಶೋಕ್ ಶೆಟ್ಟಿ ಸಂಸಾಡಿ ಸ್ವಾಗತಿಸಿದರು. ಪ್ರತೀಶ್ ಶೆಟ್ಟಿ ವಂದಿಸಿದರು.