ಉಪ್ಪುಂದ, ಫೆ 25(DaijiworldNews/MS): ಗ್ರಾಮಿಣ ಭಾಗದ ಜನ ಆರ್ಥಿಕವಾಗಿ ತೀರಾ ಹಿಂದುಳಿದಿರುವುದನ್ನು ಗಮನಿಸಿದ ಪ್ರದಾನಿ ಮೋದಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ವಿಮೆ ಜ್ಯಾರಿಗೆ ತಂದಿದ್ದು ಆಯುಷ್ಮಾನ್ ಯೋಜನೆಯಡಿಯಲ್ಲಿ ಪ್ರತೀ ವರ್ಷ ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷ ಹಾಗೂ ಎಪಿಎಲ್ ಕಾರ್ಡುದಾರರಿಗೆ 2 ಲಕ್ಷದಂತೆ ಉಚಿತ ಆರೋಗ್ಯ ಸೌಲಭ್ಯ ನೀಡುತ್ತಿದೆ. ಅಲ್ಲದೇ ಪ್ರತೀ ವರ್ಷ 22 ರೂಪಾಯಿ ಪಾವತಿಸಿದರೆ 2 ಲಕ್ಷದ ವರೆಗೆ ಆರೋಗ್ಯ ವಿಮಾ ಪಾಲಿಸಿಯನ್ನೂ ನೀಡುತ್ತಿದೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
.jpg>
ಅವರು ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳಲಾಗಿದ್ದ ಸಮೃದ್ಧ ಬೈಂದೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ರಾಷ್ಟ್ರೀಯ ಬಾಯಿ ಆರೋಗ್ಯ ಪಾಲಿಸಿ ಮತ್ತು ದಂತ ಭಾಗ್ಯ ಯೋಜನೆ, ಉಡುಪಿ ಜಿಲ್ಲೆ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಎ.ಜೆ.ದಂತ ವೈದ್ಯಕೀಯ ಮಹಾ ವಿದ್ಯಾಲಯ ಮಂಗಲೂರು ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಸಹಯೋಗೊಂದಿಗೆ ನಡೆದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರದ ಸಮಾರೋಪ ಸಮಾರಂದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಬಿರದಲ್ಲಿ ಸುಮಾರು 140 ಜನ ಶಿಬಿರಾರ್ಥಿಗಳು ಭಾಗವಹಿಸಿ ಉಚಿತ ದಂತ ಪಂಕ್ತಿಗಳನ್ನು ಪಡೆದುಕೊಂಡರು. ಸಭೆಯ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಬೈಂದೂರು ಸಮುದಾಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್, ಮಂಗಲುರು ಎ.ಜೆ. ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನ ಪ್ರೊಸ್ಥೋಡೋಂಟಿಕ್ಸ್ ನ ಮುಖ್ಯಸ್ಥೆ ಡಾ. ವಿದ್ಯಾ ಶೆಣೈ ಉಪಸ್ಥಿತರಿದ್ದರು. ಸಮೃದ್ಧ ಬೈಂದೂರು ಯೋಜನೆಯ ಶೋಧನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟೀ ಬಿ.ಎಸ್.ಸುರೇಶ್ ಶೆಟ್ಟಿ ಪ್ರಾಸ್ತಾವಿಸಿ ಸ್ವಾಗತಿಸಿದರು.