ಬೈಂದೂರು, ಫೆ 25(DaijiworldNews/MS): ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಲಕ್ ಪತಿ ದೀದಿ ಯೋಜನೆ ಜ್ಯಾರಿಗೆ ತಂದಿದ್ದು, ಗ್ರಾಮೀಣ ಭಾಗದ 1 ಕೋಟಿ ಹೆಣ್ಮಕ್ಕಳಿಗೆ ತಲಾ 1 ಲಕ್ಷದ ಧನಸಹಾಯ ನೀಡಲಿದೆ. ಈ ಯೋಜನೆ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ. ಕಾರ್ಮಿಕ ವರ್ಗ ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಸಮರ್ಥ ಭಾರತ ಸಮೃದ್ಧ ಬೈಂದೂರು ಘೋಷವಾಕ್ಯದಡಿ ಉಡುಪಿ ಜಿಲ್ಲಾ ಭಾರತೀಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ.) ಹಾಗೂ ಶ್ರಮ್ ಚಾರಿಟೇಬಲ್ ಟ್ರಸ್ಟ್(ರಿ.) ಇವರ ಜಂಟಿ ಆಶ್ರಯದಲ್ಲಿ ಬೈಂದೂರಿನ ಜೆ.ಎನ್.ಆರ್ ಕಲಾ ಮಂದಿರದಲ್ಲಿ "ಕಾರ್ಮಿಕರ ಸಮಾವೇಶ"ವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶ್ರಮಿಕ ವರ್ಗದ ಬಾಂಧವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಜಾರಿಗೆ ತಂದಿರುವ ಬಹುಮಹತ್ವಾಕಾಂಕ್ಷೆ ಯೋಜನೆಯಾದ ಪಿ.ಎಂ. ವಿಶ್ವಕರ್ಮ ಯೋಜನೆಯ ಕುರಿತು ವಿಚಾರ ವಿನಿಮಯ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಶ್ರಮ್ ಚಾರಿಟೇಬಲ್ ಟ್ರಸ್ಟ್ ಸಂಚಾಲರಾದ ಮೋಹನ್ ಚಂದ್ರ ಅವರು, ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಅವರು, ಪಿ. ಎಂ. ವಿಶ್ವಕರ್ಮ ಸಮಿತಿಯ ಅಧ್ಯಕ್ಷರಾದ ವಾರಿಜ, ಸಮೃದ್ಧ ಬೈಂದೂರು ಸಂಚಾಲಕ ಬಿ. ಎಸ್. ಸುರೇಶ್ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.