ಮಂಗಳೂರು, ಫೆ 24(DaijiworldNews/AA): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಮಂಗಳೂರಿನ ಬೊಂದೇಲ್ ಮೈದಾನವನ್ನು ಉದ್ಘಾಟಿಸಿರುತ್ತಾರೆ. ಆದರೆ ಇಂದು ಅದೇ ಮೈದಾನ ದುರದೃಷ್ಟಕರವೆಂಬಂತೆ ಜನರ ಉಪಯೋಗಕ್ಕೆ ಸಿಗದೆ ಮದ್ಯವ್ಯಸನಿಗಳ ಸುರಕ್ಷಿತ ತಾಣವಾಗಿದೆ.
ಮೈದಾನದಲ್ಲಿನ ಪೊದೆಗಳಲ್ಲಿ ಮದ್ಯದ ಟೆಟ್ರಾ ಪ್ಯಾಕ್ ಗಳು, ಬಿಯರ್ ಬಾಟಲಿಗಳು, ಗ್ಲಾಸ್ ಚೂರುಗಳು, ನೀರಿನ ಬಾಟಲಿಗಳೇ ತುಂಬಿ ಹೋಗಿದೆ. ಇನ್ನು ಸಂಜೆ ಅಥವಾ ರಾತ್ರಿಯ ವೇಳೆ ಜನರು ತಮ್ಮ ವಾಹನದಲ್ಲಿ ಬಂದು ಕಸವನ್ನು ಎಸೆಯುತ್ತಿರುವುದನ್ನು ಹಲವಾರು ಬಾರಿ ಇಲ್ಲಿನ ಸ್ಥಳೀಯರು ಗಮನಿಸಿರುತ್ತಾರೆ. ಜೊತೆಗೆ ಈ ಮೈದಾನವು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಕೇಂದ್ರಬಿಂದುವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಬೊಂದೇಲ್ ಮೈದಾನದಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದರಿಂದ ಈ ಸ್ಥಳವು ಅವ್ಯವಸ್ಥೆಯ ಅಡಗುತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಮದ್ಯವ್ಯಸನಿಗಳು ಗುಂಪು ಸಭೆ ನಡೆಸುವಂತ ಮೈದಾನವಾಗಿದೆ. ಈ ಕಾರಣದಿಂದ ಪೊಲೀಸರು ಪ್ರತಿನಿತ್ಯ ಈ ಪ್ರದೇಶದಲ್ಲಿ ಗಸ್ತು ತಿರುಗಬೇಕು. ಈ ರೀತಿಯಾಗಿ ಮೈದಾನದಲ್ಲಿ ಮದ್ಯವ್ಯಸನ ಮಾಡುವವರನ್ನು ಹಿಡಿದು ಶಿಕ್ಷಿಸಬೇಕು. ಈ ಮೈದಾನಕ್ಕೆ ಮಕ್ಕಳು, ವೃದ್ಧರು ಹಾಗೂ ವಾಹನ ಚಾಲನಾ ತರಬೇತಿ ಪಡೆಯಲು ಹಲವಾರು ಮಂದಿ ಬರುತ್ತಾರೆ. ಆದ್ದರಿಂದ ಮೈದಾನದ ಸ್ವಚ್ಛತೆ ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.