ಮಂಗಳೂರು,ಫೆ 23(DaijiworldNews/ AK): ಅಕ್ರಮವಾಗಿ ಎಂಡಿಎಂಎ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಓರ್ವನನ್ನು ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಶಿವನಗರದ ಮೂಡು ಶೆಡ್ಡೆ, ಬದ್ರಿಯಾ ಮಂಜಿಲ್ ನವನಾದ ಮೊಹಮ್ಮದ್ ರಿಜ್ವಾನ್(34) ಎಂದು ಗುರುತಿಸಲಾಗಿದೆ. ಫೆ.೨೩ ಶುಕ್ರವಾರದಂದು ಪಡುಶೆಡ್ಡೆ ಗ್ರಾಮದ ಬೊಂದೆಲ್ – ಮೂಡುಶೆಡ್ಡೆ ರಸ್ತೆಯಲ್ಲಿರುವ ರೈಲ್ವೆ ಟ್ರ್ಯಾಕ್ ನ ರೈಲ್ವೆ ಅಂಡರ್ ಪಾಸ್ ಬಳಿಯಲ್ಲಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಒಟ್ಟು 91,280 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ .75 ಸಾವಿರ ರೂ ಮೌಲ್ಯದ 15 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಹಾಗೂ ಆಟೋರಿಕ್ಷಾವನ್ನು ಸ್ವಾದೀನ ಪಡಿಸಲಾಗಿದೆ.ಈತನ ಮೇಲೆ ಈ ಹಿಂದೆ ಮಂಗಳೂರು ನಗರದ ಕಾವೂರು, ಮಂಗಳೂರು ಗ್ರಾಮಾಂತರ, ಕೊಣಾಜೆ ಪೊಲೀಸ್ ಠಾಣೆ ಹಾಗೂ ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ, ಹಲ್ಲೆ, ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್, ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ರವರ ನೇತೃತ್ವದಲ್ಲಿ ಈ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು.