ಮಂಗಳೂರು, ಫೆ 23(DaijiworldNews/AK):ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಸಹೋದಯ ತರಬೇತಿ ಕೇಂದ್ರದಲ್ಲಿ ಬುಧವಾರ ಆರಂಭಗೊಂಡ ಕಲಾ ಶಿಕ್ಷಣದ ಪಾಠಗಳು ಕುರಿತಾದ ಕರಾವಳಿ ಜಿಲ್ಲೆಗಳ "ಉದಕ" ಸ್ಥಾನೀಯ ಸಮ್ಮೇಳನದಲ್ಲಿ "ಕೌದಿ ತಯಾರಿ" ಕುರಿತಾದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ವಿಶೇಷ ಅಂದ್ರೆ ಅದು ಅಂಗಲ್ಲಾರಿ..ತಪ್ಪ್ಮಾಡಿದ್ರಿ.. ಹೀಗ್ ವಲೀರಿ.." ಹೀಗೆ ಸಿದ್ಧಿಸಮುದಾಯದ ಮಹಿಳೆಯರು ತಾಳ್ಮೆಯಿಂದ ಹೇಳಿಕೊಡುತ್ತಿದ್ದರೆ,ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಿಕ್ಷಕರೂ-ಕಲಾವಿದರೂ ಗಂಡುಹೆಣ್ಣೆಂಬ ಬೇಧ ಮರೆತು ಎಲ್ಲರೂ ಕೌದಿ ತಯಾರಿಯಲ್ಲಿ ತೊಡಗಿದ ಅಪರೂಪದ ದೃಶ್ಯ ಕಂಡುಬಂತು.
ಕಲಾವಿದೆ ಅನಿತಾ ಎನ್. ಅವರ ಮಾರ್ಗದರ್ಶನದಲ್ಲಿ ಸಿದ್ದಿ ಸಮುದಾಯದ ಕೌದಿ ಕಲಾವಿದರಾದ ಹಜರಂಬಿ, ಹುಸೇನಬಿ, ಬಸೋಬಿ, ರಾಜ್ ಮಾಬಿ ಮತ್ತು ಸಖೀನಾ ಅವರು ಕೌದಿ ಹೊಲಿಯುವ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಉತ್ತರ ಕನ್ನಡ ಜಿಲ್ಲೆಯ ಮನೆಮನೆಗಳಲ್ಲಿ ಕೌದಿಗೆ ಇರುವ ಮಹತ್ವ, ಅದರ ತಯಾರಿ ಕುರಿತಾದ ಮಾಹಿತಿಯನ್ನುಎಲ್ಲರಿಗೆ ಅರ್ಥವಾಗುವ ಹಾಗೆ ತಿಳಿಸಿಕೊಟ್ಟರು. ಸಮ್ಮೇಳನದಲ್ಲಿ 60 ಮಂದಿ ಶಿಕ್ಷಕರು, ಕಲಾವಿದರು ಭಾಗವಹಿಸುತ್ತಿದ್ದು, ಭಾಗವಹಿಸಿದ ಎಲ್ಲರೂ ಉತ್ಸಾಹದಿಂದ ತೊಡಗಿಸಿಕೊಂಡದ್ದು ಕೌದಿ ಕಲಿಕೆಗೆ ಮತ್ತಷ್ಟು ಮೆರುಗು ಬಂದಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಿದ್ಧಿ ಜನಾಂಗದ ಮಹಿಳೆಯರ್ಯಾರೂ ಹೆಚ್ಚು ಕಲಿತವರಲ್ಲ. ಕೆಲವರಂತೂ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಇನ್ನು ಈ ಕಾರ್ಯಗಾರದ ಬಗ್ಗೆ ಸಿದ್ಧಿ ಮಹಿಳೆ ಹುಸೇನಬಿ ಯವರು ಮಾತನಾಡಿ, "ನನ್ನವ್ವ ನನ್ನ ಶಾಲೆಗೇ ಕಳಿಸಿಲ್ರೀ.. ಆದ್ರೂ ನಾವ್ ಟೀಚರಂಗೆ ಕೌದಿ ವಲಿಯೋದ್ನ ಹೇಳಿಕೊಡೋಕೆ ಬಂದೀವಿ.. ತುಂಬಾನೆ ಖುಷಿ ಆಯ್ತು" ಎಂದು ಖುಷಿ ಹಂಚಿಕೊಂಡರು.
ಕೌದಿ ಬಗ್ಗೆ ಕೇಳಿದ್ದೆ, ಅದರ ಹಿಂದೆ ಇಷ್ಟೊಂದು ಶ್ರಮ ಇದೆ ಅಂತ ಅದರ ತಯಾರಿಯಲ್ಲಿ ತೊಡಗಿದಾಗ ಗೊತ್ತಾಯ್ತು ಎಂದು ಶಿರಸಿ, ಉತ್ತರ ಕನ್ನಡ ಶಿಕ್ಷಕರು, ಅನಿಲ್ ಮೇಲಿನ ಕೇರಿ ಹೇಳಿದರು.
ಇಂಡಿಯಾ ಫೌಂಡೇಶನ್ ನ ಮೇನಕ ರೋಡ್ರಿಗಸ್, ಕೃಷ್ಣಮೂರ್ತಿ, ರಾಧಿಕಾ , ಋತಿಕಾ ಮಿಶ್ರಾ, ಚಂದನ್ ಸಮ್ಮೇಳನದಲ್ಲಿ ಉಪಸ್ಥಿತರಿದ್ದು ಶಿಕ್ಷಕ ಕಲಾವಿದರನ್ನು ಬೆಂಬಲಿಸಿದರು.
ಕಲಾಶಿಕ್ಷಣ ವಿಭಾಗ, ಐಎಫ್ಎ ಬೆಂಗಳೂರು, ಹಿರಿಯ ಕಾರ್ಯನಿರ್ವಹಣಾಧಿಕಾರಿ, ಕೃಷ್ಣಮೂರ್ತಿ ಮಾತನಾಡಿ, ಕಲಾಶಿಕ್ಷಣ ವಿಭಾಗ, ಐಎಫ್ಎ ಬೆಂಗಳೂರುಶಿಕ್ಷಕರಿಗೆ ಸಾಂಪ್ರದಾಯಿಕ ಕಲೆಗಳನ್ನು ಪರಿಚಯಿಸುವ ಸಲುವಾಗಿ ಸಮ್ಮೇಳನದಲ್ಲಿ ಸಿದ್ಧಿ ಸಮುದಾಯದವರಿಂದ ಕೌದಿ ಕಲಿಕೆಯ ಕಾರ್ಯಾಗಾರ ಆಯೋಜಿಸಲಾಗಿದೆ.