ಕಾಸರಗೋಡು,ಏ27(Daijiworld News/AZM):ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಪ್ರಮಾಣದ ನಕಲಿ ಮತದಾನವಾಗಿರುವುದಾಗಿ ಕಾಂಗ್ರೆಸ್ ಆರೋಪಿಸಿದ್ದು , ಮತಗಟ್ಟೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಫೂಟೇಜ್ನಲ್ಲಿ ನಕಲಿ ಮತದಾನವಾಗುತ್ತಿರುವುದು ಬೆಳಕಿಗೆ ಬಂದಿದೆ.
ಸಿಪಿಎಂ ನ ಭದ್ರಕೋಟೆಗಳಾದ ಪಯ್ಯನ್ನೂರು , ಕಲ್ಯಾಶ್ಯೇರಿ ಮತ್ತು ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ನಕಲಿ ಮತದಾನ ವಾಗಿರುವುದಾಗಿ ಕಾಂಗ್ರೆಸ್ ಆರೋಪಿಸುವುದರ ಜೊತೆಗೆ ಸಿಸಿಟಿವಿ ದೃಶ್ಯಗಳು ಹೊರಬಂದಿರುವುದು ಸಾಕಷ್ಟು ಚರ್ಚಗೆ ಎಡೆ ಮಾಡಿಕೊಟ್ಟಿದೆ.
ಸಿಪಿಲಾತ್ತರ ಎ ಯು ಪಿ ಶಾಲೆಯ 19 ನೇ ಮತಗಟ್ಟೆಯ ಯಲ್ಲಿ ನಕಲಿ ಮತದಾನದ ಆರು ಮಂದಿಯ ದೃಶ್ಯ ಹೊರಬಂದಿದೆ. ಓರ್ವ ಇನ್ನೊಬ್ಬನ ಮತವನ್ನು ಹಾಕುತ್ತಿರುವುದು . ಈತ ಎರಡು ಮತಗಳನ್ನು ಈ ಮತಗಟ್ಟೆಯಲ್ಲಿ ಚಲಾಯಿಸಿರುವುದು ಸಿಸಿಟಿವಿ ದೃಶ್ಯದಲ್ಲಿದೆ.
ನಕಲಿ ಗುರುತು ಚೀಟಿ ಬಳಸಿ ಇನ್ನೊಂದು ಮತಗಟ್ಟೆಯವರು ಈ ಮತಗಟ್ಟೆಯಲ್ಲಿ ಮತಚಲಾಯಿಸಿರುವುದು ಕಂಡು ಬರುತ್ತಿದೆ. ಮತಗಟ್ಟೆ ಅಧಿಕಾರಿ ಯ ಕಣ್ಮುಂದೆ ನಕಲಿ ಮತದಾನ ನಡೆಯುತ್ತಿರುವುದು ವಿಶೇಷವಾಗಿದ್ದು, ಮತಗಟ್ಟೆಯ 774 ನೇ ಮತದಾರ ಪದ್ಮಿನಿ ಎಂಬ ಮಹಿಳೆ ಎರಡು ಬಾರಿ ಮತಚಲಾಯಿಸಲು ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ .
ಕೈ ಬೆರಳಿಗೆ ಹಾಕಿದ ಶಾಯಿ ಯನ್ನು ಕೂಡಲೇ ತಲೆಗೆ ಸವರುತ್ತಿರುವುದು ದೃಶ್ಯದಲ್ಲಿದೆ. ಇದೆ ಮಹಿಳೆ ಚೆರುತ್ತಾಯ ಪಂಚಾಯತ್ ನ 50 ನೇ ನಂಬ್ರದ ಮತಗಟ್ಟೆಯಲ್ಲಿ 19ನೇ ನಂಬ್ರದ ಮತದಾರಳಾಗಿ ಮತ್ತೆ ಮತದಾನ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೆ ರೀತಿ ಒಂದೇ ಮತಗಟ್ಟೆಯಲ್ಲಿ ಆರರಷ್ಟು ಮಂದಿಯ ನಕಲಿ ಮತದಾನದ ಸಿಸಿಟಿವಿ ದೃಶ್ಯ ಕಂಡುಬಂದಿದೆ.
ಇನ್ನೋಬ್ಬರು ಮಹಿಳೆ ಒಂದು ಗಂಟೆಗೂ ಅಧಿಕ ಕಾಲ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಬಂದಾಗ ತನ್ನ ಮತ ಯಾರೂ ಚಲಾಯಿಸಿರುವುದು ಕಂಡುಬಂದಿದೆ. ಬಳಿಕ ಕೆಲ ಹೊತ್ತು ಮತಗಟ್ಟೆಯಲ್ಲೇ ಕುಳಿತ ಈಕೆ ಮತ ಚಲಾಯಿಸಲು ಸಾಧ್ಯವಾಗದೆ ಮರಳುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬರುತ್ತಿದೆ. ರಾಜಕೀಯ ಪಕ್ಷದ ಮುಖಂಡರು ಮತಗಟ್ಟೆಯೊಳಗೆ ಪ್ರವೇಶಿಸಿ ನಿಂತಿರುವುದು ದ್ರಶ್ಯದಲ್ಲಿ ಕಂಡು ಬರುತ್ತಿದೆ. ಪಕ್ಷವೊಂದರ ಸ್ಥಳೀಯ ಮುಖಂಡರು ಮತಗಟ್ಟೆಯಲ್ಲಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬರುತ್ತಿದೆ.
ಹೀಗೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ ಪ್ರತಿ ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುತ್ತಿದ್ದು , ಈ ಬಾರಿ ಮತದಾನ ಹೆಚ್ಚಳ ಹಾಗೂ 100 ಕ್ಕೂ ಅಧಿಕ ಮತಗಟ್ಟೆಗಳಲ್ಲಿ 90 ಶೇಕಡಾ ಹಾಗೂ ಕೆಲ ಮತಗಟ್ಟೆಗಳಲ್ಲಿ 99 ಶೇಕಡಾ ಮತದಾನ ವಾಗಿರುವುದು ಮತ್ತಷ್ಟ ಸಂಶಯಕ್ಕೆ ಪುಷ್ಟಿ ನೀಡಿದ್ದು , ಇದೀಗ ಸಿಸಿಟಿವಿ ದೃಶ್ಯಗಳು ಹೊರಬಂದಿರುವುದು ಸಂಚಲನ ಮೂಡಿಸಿದೆ.
ಈ ನಡುವೆ ಸ್ಪಷ್ಟನೆ ನೀಡಿರುವ ರಾಜ್ಯ ಚುನಾವಣಾ ಆಯುಕ್ತ ಟಿಕಾರಾಂ ಮೀನಾ , ನಕಲಿ ಮತದಾನ ನಡೆದರೆ ಗಂಭೀರ ವಿಷಯ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಜಿಲ್ಲಾಧಿಕಾರಿಯವರಿಂದ ವರದಿ ಕೇಳಲಾಗಿದೆ . ವರದಿ ಲಭಿಸಿದ ಬಳಿಕ ಮುಂದಿನ ಕ್ರಮ, ಘಟನೆಯನ್ನ ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಕಾನೂನು ಹೋರಾಟಕ್ಕೂ ಮುಂದಾಗಿದ್ದು , ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.