ಮಂಗಳೂರು, ನ 17: ಕರಾವಳಿಯ ಜನರ ಬಾಯಿಯಲ್ಲಿ ಮಾಮೂಲಾಗಿ ನಲಿದಾಡುವ ಅಂಡೆ-ಪಿರ್ಕಿ, ಆ್ಯಂಡಿ ಪಿರ್ಕಿಯಾಗಿ ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಆ್ಯನಿಮೇಷನ್ ಪಾತ್ರವಾಗಿ ಪೋಗೊ ಚಾನೆಲ್ ನಲ್ಲಿ ಸದ್ದು ಮಾಡಲಿದೆ.
ಸಣ್ಣ ಸಣ್ಣ ಮಕ್ಕಳು ಟಿವಿ ಮುಂದೆ ಕೂತರೆ ಸಾಕು, ಕಾರ್ಟೂನ್ ನೆಟ್ವರ್ಕ್, ಪೋಗೊ, ಡಿಸ್ನಿ, ಹಂಗಾಮ, ಚಿಂಟು ಈ ರೀತಿಯ ಚಾನೆಲ್ ಗಳತ್ತ ಬೇಗನೇ ಆಕರ್ಷಿತರಾಗುತ್ತಾರೆ. ಚೋಟಾ ಭೀಮ್, ಡೋರೆಮೋನ್, ಮೋಟು ಪತ್ಲು ಇವೆಲ್ಲಾ ಮಕ್ಕಳ ಬಲು ಇಷ್ಟವಾದ ಆನಿಮೇಷನ್ ಪಾತ್ರಗಳು. ಆದರೆ ಇದೀಗ ಈ ಎಲ್ಲಾ ಪಾತ್ರಗಳಿಗೆ ತೀವ್ರ ಪೈಪೋಟಿ ಕೊಡಲು ಆ್ಯಂಡಿ ಪಿರ್ಕಿ ಅನ್ನೋ ಆ್ಯನಿಮೇಷನ್ ಪಾತ್ರವೊಂದು ತಯಾರಾಗಿ ನಿಂತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಗೋ ಚಾನೆಲ್ ವೊಂದರಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ಈ ಆ್ಯನಿಮೇಷನ್ ಚಿತ್ರದ ಹೆಸರು ತುಳುನಾಡಿನ ಭಾಷೆಯಲ್ಲಿರುವುದು ಹೆಮ್ಮೆಯ ಸಂಗತಿ.
ಆ್ಯಂಡಿ ಪಿರ್ಕಿ ಹೆಸರಿನಲ್ಲಿರುವ ಈ ಆ್ಯನಿಮೇಷನ್ ಪಾತ್ರವು ಸದ್ಯ ಆನಿಮೇಶನ್ ಕ್ಷೇತ್ರದಲ್ಲಿ ಹವಾ ಎಬ್ಬಿಸಿರುವ ಚೋಟಾ ಭೀಮ್, ಡೋರೆಮೋನ್, ಮೋಟು ಪತ್ಲುನಂತಹ ಪಾತ್ರಗಳಿಗೆ ಸೆಡ್ಡು ಹೊಡೆದಿದ್ದು, ಕಲೆಯ ಜಗತ್ತಿನ ಅದ್ಭುತ ಚಿತ್ರವಾಗಿ ಮೂಡಿ ಬಂದಿದೆ.
ಆ್ಯನಿಮೇಷನ್ ಕ್ಷೇತ್ರದಲ್ಲಿ ತುಳುನಾಡಿನ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ರಾಷ್ಟ್ರ ಮತ್ತು ಅಂತ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿಸಲು ಕಾರಣವಾಗಿರುವ ಸಂಸ್ಥೆ ಮಂಗಳೂರಿನಲ್ಲಿರುವ ಓಂ ಆ್ಯನಿಮೇಷನ್ ಸ್ಟೂಡೀಯೋ. ಸತತ ಮೂರು ವರುಷಗಳಿಂದ ಓಂ ಆ್ಯನಿಮೇಷನ್ ಸ್ಟೂಡೀಯೋ ನಿರಂತರ ಶ್ರಮವಹಿಸಿ ಕೆಲಸ ಮಾಡಿದ ಫಲವಾಗಿ ಈ ಆಂಡಿಪಿರ್ಕಿ ಪಾತ್ರ ಇದೀಗ ಭಾರತ ಸೇರಿದಂತೆ ಸಾರ್ಕ್ ದೇಶಗಳಾದ ಅಫಘನಿಸ್ತಾನ, ಭಾಂಗ್ಲಾದೇಶ, ಭೂತಾನ್, ಮಾಲ್ಡಿವ್ಸ್, ನೇಪಾಳ, ಶ್ರೀಲಂಕ ಮತ್ತು ಪಾಕಿಸ್ತಾನ ಹೀಗೆ ಅನೇಕ ದೇಶಗಳಲ್ಲಿ ಪೋಗೊ ಚಾನೆಲ್ ನಲ್ಲಿ ಪ್ರಸಾರವಾಗಿ ಮಕ್ಕಳಿಗೆ ಪ್ರೀತಿ ಪಾತ್ರವಾಗಲಿದೆ.
ಕಳೆದ 2015, 16 ಮತ್ತು 17ರಲ್ಲಿ ಓಂ ಆ್ಯನಿಮೇಷನ್ ಸ್ಟೂಡೀಯೋ ಆ್ಯಂಡಿ ಪಿರ್ಕಿ ಆ್ಯನಿಮೇಷನ್ ಚಿತ್ರಕ್ಕಾಗಿ ನಿರಂತರ ಶ್ರಮವಹಿಸುತ್ತಲೇ ಬಂದಿದ್ದು, ಸತತ ಮೂರು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ಈ ಆ್ಯಂಡಿ ಪಿರ್ಕಿ ಆ್ಯನಿಮೇಷನ್ ಚಿತ್ರದ ಹಿಂದೆ ಅನೇಕ ತಂತ್ರಜ್ಞರ ಕೈವಾಡವಿದ್ದು, ಒಂದಷ್ಟು ಸೃಜನಶೀಲರು ಚಿತ್ರದ ಕಟ್ಟುವಿಕೆಯಲ್ಲಿ ತೊಡಗಿಸಿಕೊಂಡಿರುವುದ ಗಮನಾರ್ಹ ಸಂಗತಿ.
ಡಿಸೆಂಬರ್ 3 ರಿಂದ ಅಂಡೆ ಪಿರ್ಕಿ ಅಂತರಾಷ್ಟ್ರೀಯ ಆ್ಯನಿಮೇಷನ್ ವಾಹಿನಿ ಪೋಗೋದಲ್ಲಿ ಆ್ಯಂಡಿ ಪಿರ್ಕಿಯಾಗಿ ಪ್ರಸಾರವಾಗಲಿದ್ದು, ಸುಂದರ ಕಲ್ಪನೆಯಲ್ಲಿ ಚಿತ್ರ ಮೂಡಿ ಬಂದಿದೆ. ಇಲಿ ಮತ್ತು ಬೆಕ್ಕಿನ ಪಾತ್ರಕ್ಕೆ ಆ್ಯನಿಮೇಷನ್ ರೂಪ ನೀಡಿ ಹೇಗೆ ಟಾಮ್ ಅಂಡ್ ಜೆರಿ ಆಯಿತೋ ಹಾಗೆಯೇ ಆ್ಯಂಡಿ ಪಿರ್ಕಿ ಚಿತ್ರದಲ್ಲಿ ಇಬ್ಬರು ಗೆಳೆಯರ ನಡುವಿನ ಹಾಸ್ಯ ಭರಿತ ಪ್ರಸಂಗವನ್ನು ಬಹಳ ಸುಂದರವಾಗಿ ಹೆಣೆದು ತೋರಿಸಿದ್ದಾರೆ. ಭಾರತ ಸೇರಿದಂತೆ ಯಾವುದೇ ದೇಶದ ಸಂಸ್ಕ್ರತಿಯನ್ನು ಈ ಚಿತ್ರ ಅನುಸರಿಸದೆ ಇರುವುದರಿಂದ ಯಾವುದೇ ವ್ಯಕ್ತಿ ಈ ಚಿತ್ರವನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಈ ಚಿತ್ರದಲ್ಲಿ ಆ್ಯಂಡಿ-ಪಿರ್ಕಿ ಇಬ್ಬರು ಪ್ರಮುಖ ಪಾತ್ರದಲ್ಲಿದ್ದಾರೆ. ಆ್ಯಂಡಿ ಅಂದರೆ ಒಂದು ಡೈನೋಸರ್ ಪಾತ್ರ. ಪಿರ್ಕಿ ಅಂದ್ರೆ ಕಾಡಿನ ಗುಹೆಯಲ್ಲಿ ವಾಸಿಸುವ ಒಬ್ಬ ಆದಿ ಮಾನವನ ಪಾತ್ರ. ಆ್ಯಂಡಿ ಪಿರ್ಕಿಯಲ್ಲಿ ಒಬ್ಬ ಬಹಳ ಬುದ್ದಿವಂತನಾದರೆ, ಇನ್ನೊಬ್ಬ ದಡ್ಡ. ಹೀಗೆ ಆ್ಯಂಡಿ ಪಿರ್ಕಿಯರ ನಡುವಿನ ಚೇಷ್ಟೆ ಚಿಣ್ಣರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ಮಂಗಳೂರಿನ ಓಂ ಆ್ಯನಿಮೇಷನ್ ಸ್ಟೂಡೀಯೋ ಸದ್ದಿಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು, ಮಕ್ಕಳ ಆ್ಯನಿಮೇಷನ್ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ವಿವೇಕ್ ಅವರು ಈ ತಂಡದ ರೂವಾರಿ. ಕಳೆದ 4 ವರ್ಷಗಳ ನಿರಂತರ ಶ್ರಮ ಈ ಆ್ಯನಿಮೇಷನ್ ಚಿತ್ರದಲ್ಲಿದ್ದು, ಒಟ್ಟು 78 ಎಪಿಸೋಡ್ ಗಳ ಸಿರೀಯಲ್ ಇದಾಗಿದೆ. ಈಗಾಗಲೇ 20 ಎಪಿಸೋಡ್ ಗಳನ್ನು ಈ ತಂಡ ರಚಿಸಿದ್ದು, ಡಿಸೆಂಬರ್ 3 ರಿಂದ ಅಂತರಾಷ್ಟ್ರೀಯ ಆ್ಯನಿಮೇಷನ್ ವಾಹಿನಿ ಪೋಗೋದಲ್ಲಿ ಆ್ಯಂಡಿ ಪಿರ್ಕಿ ಪ್ರಸಾರವಾಗಲಿದೆ.