ಸುಳ್ಯ, ಫೆ 22 (DaijiworldNews/HR): ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸರಕಾರಿ ಕಿರಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆಗೆ ಬೆಂಗಳೂರಿನ ವಿಧಾನ ಸೌಧಕ್ಕೆ ಆಗಮಿಸಿ ವಿಧಾನ ಸಭಾ ಕಲಾಪ ವೀಕ್ಷಿಸಿದರು.
ಬೆಂಡೋಡಿ ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಕುಮಾರಿ ನೇತೃತ್ವದಲ್ಲಿ ಶಾಲೆಯ 14 ಮಂದಿ ಪುಟಾಣಿಗಳು ವಿಧಾನ ಸಭಾ ಕಲಾಪ ವೀಕ್ಷಿಸಿದರು. ಅದಕ್ಕೂ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಶಾಲಾ ಬೇಡಿಕೆಗಳ ಬಗ್ಗೆ ಮಕ್ಕಳು ಮನವಿ ಸಲ್ಲಿಸಿದರು. ಬಳಿಕ ಯು.ಟಿ.ಖಾದರ್ ಅವರ ಜೊತೆಗೆ ವಿಧಾನ ಸೌಧದ ಮುಂಭಾಗ ಪೊಟೊ ತೆಗೆಸಿಕೊಂಡರು. ಪ್ರಥಮ ಬಾರಿಗೆ ವಿಧಾನ ಸಭಾ ಕಲಾಪ ವೀಕ್ಷಿಸಿದ ಮಕ್ಕಳು ಸಂತಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕೊಲ್ಲಮೊಗ್ರು ವಿಗೆ ಆಗಮಿಸಿದ್ದ ಯು.ಟಿ.ಖಾದರ್ ಅವರು ಗ್ರಾಮದ ಸರಕಾರಿ ಶಾಲೆಯೊಂದರ ಮಕ್ಕಳಿಗೆ ವಿಧಾನ ಸಭಾ ಕಲಾಪ ವೀಕ್ಷಣೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದಂತೆ ಕಲಾಪ ವಿಕ್ಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.