ಕುಂದಾಪುರ, ಫೆ 19 (DaijiworldNews/HR): ದೇಶದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಹಿಂದುತ್ವದ ಕೋಟೆಯಾದ ಕರಾವಳಿಯಲ್ಲಿ ಮೈ ಕೊಡವಿ ನಿಂತಿದ್ದ ಸತ್ಯಜಿತ್ ಸುರತ್ಕಲ್ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಕೇಂದ್ರದಲ್ಲಿ ಮೋದಿ, ಗುಜರಾತಿನಲ್ಲಿ ಯೋಗಿ ಇದ್ದ ಹಾಗೇ ಮಂಗಳೂರಿಗೆ ಸತ್ಯಜಿತ್ ಸುರತ್ಕಲ್ ಅವರನ್ನು ಕೊಡಿ ಎಂದು ಕುಂದಾಪುರದಲ್ಲಿ ನಡೆದ ಆಗ್ರಹ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಧನಂಜಯ ಕುಂದಾಪುರ ಆಗ್ರಹಿಸಿದ್ದಾರೆ.
ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಕರೆಯಲಾದ ಆಗ್ರಹ ಸಭೆಯಲ್ಲಿ ಅಭಿಮಾನಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು, ಸತ್ಯಜಿತ್ ಕೇವಲ ಹಿಂದೂ ಮುಖಂಡರಾಗಿರಲಿಲ್ಲ. ಅವರೊಬ್ಬ ಹಿಂದುತ್ವದ ಪ್ರತಿಪಾದಕರಾಗಿದ್ದವರು. ಹಿಂದುತ್ವವನ್ನು ತಪಸ್ಸಿನಂತೆ ಆಚರಿಸಿಕೊಂಡು ಬಂದವರು. ರಾಮಮಂದಿರದ ನಿರ್ಮಾಣಕ್ಕೆ ಆರಂಭದಲ್ಲಿ ಕರಸೇವಕರಾಗಿ ಪ್ರಮುಖ ಪಾತ್ರವಹಿಸಿದವರು ಸತ್ಯಜಿತ್. ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸತ್ಯಜಿತ್ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ತನ್ನನ್ನು ತಾನು ಹಿಂದುತ್ವಕ್ಕೆ ಅರ್ಪಿಸಿಕೊಳ್ಳುವ ಮೂಲಕ ಕರಾವಳಿ ಮಾತ್ರವಲ್ಲ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಹುಟ್ಟಿಗೆ ಕಾರಣವಾದ ಸತ್ಯಜಿತ್ ಓರ್ವ ಯೋಗ್ಯ ವ್ಯಕ್ತಿ. ಅವರಿಗೆ ಈ ಬಾರಿ ಟಿಕೆಟ್ ಸಿಗುವ ಭರವಸೆ ಇದೆ ಎಂದು ಅಚ್ಯುತ್ ಅಮೀನ್ ಕಲ್ಮಾಡಿ ಆಗ್ರಹಿಸಿದರು.
ಈ ಸಂದರ್ಭ ಸತ್ಯಜಿತ್ ಸುರತ್ಕಲ್ ಅಭಿಮಾನಿಗಳು ಹಾಜರಿದ್ದರು.