ಮಂಗಳೂರು, ಫೆ 19 (DaijiworldNews/MS): ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟ, ಉಳ್ಳಾಲ ಬಸ್ಸು ಚಾಲಕರು ಮತ್ತು ನಿರ್ವಾಹಕರಿಗೆ ಮಾರ್ಗದರ್ಶನ ಶಿಬಿರ ಕಾರ್ಯಕ್ರಮ ಬೆಂದೂರು ಸೆಬಾಸ್ಟಿಯನ್ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಬಿ.ಪಿ.ದಿನೇಶ್ ಕುಮಾರ್ ಬಸ್ಸು ಚಾಲಕರು ಮತ್ತು ನಿರ್ವಾಹಕರಿಗೆ ಮಾರ್ಗದರ್ಶನ ಶಿಬಿರಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಪೊಲೀಸರನ್ನು ತೊಂದರೆ ಕೊಡುವಂತಹ ಇಲಾಖೆಯವರು ಎಂಬ ತಪ್ಪು ಭಾವನೆಯಿಂದ ಖಾಸಗಿ ಬಸ್ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ದಂಡ ಪಾವತಿಸುವ ಮೂಲಕ ಸಿಬ್ಬಂದಿ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಮಾಡುತ್ತಿಲ್ಲ . ಜೀವಹಾನಿ, ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಮೋಟಾರು ವಾಹನ ಕಾಯಿದೆಯ ಅನುಷ್ಠಾನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂಬುದನ್ನು ಬಸ್ ಸಿಬ್ಬಂದಿ ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉಪಸಾರಿಗೆ ಅಧಿಕಾರಿ ವಿಶ್ವನಾಥ್ ನಾಯಕ್ ಮಾತನಾಡಿ, ಬಸ್ ಸಿಬ್ಬಂದಿ ಶಿಸ್ತು ಪಾಲಿಸಿದಲ್ಲಿ ಪೊಲೀಸ್ ಅಧಿಕಾರಿಗಳೇ ಗೌರವಿಸುತ್ತಾರೆ. ಜಿಲ್ಲೆಯಲ್ಲಿ ಸರಳ ಸಜ್ಜನಿಕೆಯ ಮಾಲೀಕರಿದ್ದಾರೆ. ಬಸ್ ಆಪರೇಟರ್ ಗಳಿಗೂ ಸಿಬ್ಬಂದಿಗೂ ಉಳಿದ ಜಿಲ್ಲೆಗಳಲ್ಲಿ ಇರದ ನಿಕಟ ಸಂಪರ್ಕವಿದೆ. ಘನವಾಹನ ಲೈಸೆನ್ಸ್ ರಿನಿವಲ್ ಪಡಕೊಂಡವರು ಮುಡಿಪು ಪುನಶ್ಚೇತನ ತರಬೇತಿ ಪಡೆದು ಕೊಳ್ಳುವುದು ಕಡ್ಡಾಯ. ಚೆಕಿಂಗ್ ಇಲ್ಲವೆಂದು ಕಾನೂನು ಮೀರಿ ಹೋದರೆ ಸಿಸಿಟಿವಿ ಕಣ್ಗಾವಲಿನಲ್ಲಿದೆ. ಕೇರಳ ಭಾಗದಲ್ಲಿ ಸೀಟ್ ಬೆಲ್ಟ್ ಹಾಕದೇ ಇದ್ದರೂ, ಮಂಗಳೂರು ಆರ್ ಟಿಓಗೆ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಮಾಡಲು ಕಾನೂನಿದೆ. ರಸ್ತೆಯಲ್ಲಿರುವ ಸಂದರ್ಭದಲ್ಲಿ ಜಾಗರೂಕರಾಗಿರಿ ಎಂದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ವಿವಿಧ ಧರ್ಮಕೇಂದ್ರದಲ್ಲಿ ವೃತ್ತಿ ನಿರ್ವಹಿಸುವ ಅರ್ಚಕರಂತೆ, ನಿರ್ವಾಹಕರು, ಚಾಲಕರು ಖಾಕಿ ಹಾಕಿರುವ ಅರ್ಚಕರಾಗಿದ್ದಾರೆ. ಬಸ್ ಮಾಲೀಕರು ಕಷ್ಟದಲ್ಲಿದ್ದಾರೆ. ಸಿಬ್ಬಂದಿ ನಗುಮೊಗದೊಂದಿಗೆ ಪ್ರಯಾಣಿಕರಿಗೆ ಸೇವೆಯನ್ನು ನೀಡಿ. ಶಾಂತಿ ಸೌಹಾರ್ದತೆಯೊಂದಿಗೆ ಬಸ್ ಜೋಡೋ ಮಾದರಿಯಲ್ಲಿ ಕಾರ್ಯನಿರ್ವಹಿಸಿರಿ ಎಂದರು.
ಶ್ರೀ ಮಂಗಳಾದೇವಿ ಸೇವಾ ಸಮಿತಿ ಅಧ್ಯಕ್ಷ ದಿಲ್ ರಾಜ್ ಆಳ್ವ ಮಾತನಾಡಿ ,110 ವರ್ಷಗಳಿಂದ ಬಸ್ ವ್ಯವಸ್ಥೆ ಇದೆ. ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಕುರಿತು ಐಎಎಂ ಅಧ್ಯಯನ ಮಾಡಬೇಕಿದೆ. ಮಂಗಳೂರಿನ ವ್ಯವಸ್ಥೆ ವೇಗದಲ್ಲಿದೆ, ಸೆಕೆಂಡುಗಳಿಗೆ ಬಸ್ಸಿದೆ. ಜನರು ಅಷ್ಟೂ ವರ್ಷಗಳ ಆಶೀರ್ವಾದ ನೀಡಿದ್ದರೂ, ಅವರ ನಿರೀಕ್ಷೆಗಳು ಕಡಿಮೆ. ಹಾರನ್ ಹಾಕದಿರಿ, ಟಿಕೆಟ್ ನೀಡಬೇಕು, ರ್ಯಾಷ್ ಚಾಲನೆ ಮಾಡದಿರಿ ಎಂಬ ನಿರೀಕ್ಷೆಗಳನ್ನು ಸಿಬ್ಬಂದಿ ನಿರ್ವಹಿಸಿ. ಮಾಲಕರ ಮೇಲಿರುವ ಜವಾಬ್ದಾರಿಯಷ್ಟೇ ಸಿಬ್ಬಂದಿ ಮೇಲೆಯೂ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ. ಬಸ್ಸು ಮಾಲಕರ ಸಂಘ ಹಾಗೂ ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ನೋ ಹಾನ್೯ ಝೋನ್ ನಲ್ಲಿ ಹಾನ್೯ ಬಳಸದಿರಿ. ಪ್ರಯಾಣಿಕರಿಂದ 10 ರೂ ಕಾಯಿನ್ ಪಡೆಯದೆ ಸತಾಯಿಸದಿರಿ, ಪ್ರಯಾಣಿಕರು ವಾಪಸ್ಸು ಪಡೆಯದೇ ಇದ್ದಲ್ಲಿ ಮಾಲೀಕರಿಗೆ ನೀಡಿರಿ. ವಿದ್ಯಾರ್ಥಿಗಳು ಹಣ ಕೊಟ್ಟು ಪಡೆಯುವ ಚಲೋ ಕಾಡ್೯ ರಿಜೆಕ್ಟ್ ಮಾಡದಿರಿ, ಸ್ವೀಕರಿಸಿ. ವಿದ್ಯಾರ್ಥಿಗಳ ಬಳಿ ಹಣವಿಲ್ಲದಿದ್ದರೂ ಪ್ರಯಾಣಿಸಲು ಅವಕಾಶ ಕಲ್ಪಿಸಿ ಶಿಕ್ಷಣಕ್ಕೆ ಪ್ರೋತ್ಸಾಹಿಸಿರಿ ಎಂದರು.
ಭದ್ರತೆ ಒದಗಿಸಿ : ಚಾಲಕ ಅಲ್ತಾಫ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಸ್ ಚಾಲಕರ ಕುರಿತು ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ವಿಚಾರಣೆ ವಿಮರ್ಶೆ ನಡೆಸಿ ಪೊಲೀಸರು ಇಂತಹ ಪ್ರಕರಣಗಳಲ್ಲಿ ಕ್ರಮಕೈಗೊಳ್ಳಬೇಕಿದೆ. ಐದು ವರ್ಷಗಳಿಗೊಮ್ಮೆ ಹೊಸ ವಿನ್ಯಾಸಗಳ ಬಸ್ಸುಗಳನ್ನು ತರುವ ಮಾಲೀಕರು, ಚಾಲಕರ-ನಿರ್ವಾಹಕರ ಕ್ಷೇಮ ನಿಧಿಗೂ ಹೆಚ್ಚಿನ ಒತ್ತು ನೀಡಬೇಕಿದೆ. ಈ ಮೂಲಕ ಸಿಬ್ಬಂದಿಗೆ ಭದ್ರತೆಯನ್ನು ಒದಗಿಸುವ ಮಹತ್ಕಾರ್ಯ ನಡೆಸಬೇಕಿದೆ. ಬಸ್ಸು ಸಿಬ್ಬಂದಿ ಪ್ರಯಾಣಿಕರ ವಿರೋಧಿಗಳಲ್ಲ, ಮಾನವೀಯತೆಯ ದೃಷ್ಟಿಯಿಂದ ನಡೆಸುವ ಕೆಲಸಗಳು ಪೊಲೀಸರಿಗೆ ಪ್ರಕರಣಗಳಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ನಗರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೃಷ್ಣಾನಂದ ಜಿ.ನಾಯಕ, ಸಂಚಾರ ಪೂರ್ವ ಠಾಣೆಯ ಆನಂದ್ .ಇ, ಸಂಚಾರ ಪಶ್ಚಿಮ ಪೊಲೀಸ್ ನಿರೀಕ್ಷಕ ಡಿ.ಹುಳುಗಪ್ಪ , ಗೌರವಾಧ್ಯಕ್ಷ ಎನ್.ಎಸ್.ಕರೀಂ , ಬಸ್ಸು ಮಾಲೀಕರಾದ ಜಯರಾಮ್ ಶೇಖ, ರಾಮಚಂದ್ರ ಪಿಲಾರ್, ಫ್ರಾನ್ಸಿಸ್ ಡಿಸೋಜ, ಗಣೇಶ್ ಶೆಟ್ಟಿ, ಪ್ರ.ಕಾರ್ಯದರ್ಶಿ ಅನೀಶ್ ಶೆಟ್ಟಿ, ಕೋಶಾಧಿಕಾರಿ ಅಬ್ದುಲ್ ಮಜೀದ್, ಜೊತೆ ಕಾರ್ಯದರ್ಶಿ ಅವಿನ್ , ಸಚಿನ್ ಬೆಳ್ತಂಗಡಿ ಶಬರೀಶ್ ಶೆಟ್ಟಿ . ಉಪಸ್ಥಿತರಿದ್ದರು.