ಉಳ್ಳಾಲ, ಫೆ 19 (DaijiworldNews/MS): ತೊಕ್ಕೊಟ್ಟಿನಲ್ಲಿ ನಡೆಯಲಿರುವ ಡಿವೈಎಫ್ ಐ 12 ನೇ ರಾಜ್ಯ ಸಮ್ಮೇಳನದ ಪೂರ್ವಭಾರಿಯಾಗಿ ನಗರದೆಲ್ಲೆಡೆ ಆದರ್ಶಪುರುಷರ ಭಾವಚಿತ್ರಗಳುಲ್ಲ ಫ್ಲೆಕ್ಸ್ ,ಕಮಾನುಗಳು ರಾರಾಜಿಸುತ್ತಿದ್ದು,ಹರೇಕಳದ ಡಿವೈಎಫ್ ಐ ಕಚೇರಿ ಬಳಿ ಟಿಪ್ಪು ಸುಲ್ತಾನ್ ನ ಬೃಹತ್ ಕಟೌಟ್ ನಿರ್ಮಿಸಲಾಗಿದ್ದು ಇದನ್ನ ತೆರವುಗೊಳಿಸುವಂತೆ ಕೊಣಾಜೆ ಪೊಲೀಸರು ನೋಟೀಸು ನೀಡಿದ್ದಾರೆ.
ಮಂಗಳೂರಿನ ಉಳ್ಳಾಲ ತಾಲೂಕಿನ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಇದೇ ಫೆ.25,26,27 ರಂದು ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಅಲ್ಲಲ್ಲಿ ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಪ್ರತಿಮೆ, ಫ್ಲೆಕ್ಸ್ ಹಾಕಲಾಗಿದೆ.
ಹರೇಕಳದ ಡಿವೈಎಫ್ ಐ ಕಚೇರಿ ಬಳಿಯಲ್ಲೇ ಸಂಘಟನೆ ಕಾರ್ಯಕರ್ತರು ಟಿಪ್ಪು ಸುಲ್ತಾನ್ ನ ಕಾರ್ಡ್ ಬೋರ್ಡ್ ಪ್ರತಿಮೆ ಅಳವಡಿಸಿದ್ದಾರೆ. ಟಿಪ್ಪುವಿನ ಕಟೌಟ್ ಅಳವಡಿಸಲು ಅನುಮತಿ ಪಡೆಯದಿರುವುದರಿಂದ ಕೊಣಾಜೆ ಪೊಲೀಸ್ ಠಾಣಾ ಠಾಣಾಧಿಕಾರಿ ಟಿಪ್ಪು ಕಟೌಟ್ ತೆರವುಗೊಳಿಸಲು ಹರೇಕಳ ಡಿವೈಎಫ್ ಐ ಮುಖಂಡರಿಗೆ ನೋಟಿಸ್ ನೀಡಿದ್ದಾರೆ. ಆದಿತ್ಯವಾರ ಕೊಣಾಜೆ ಠಾಣಾಧಿಕಾರಿ ನೋಟೀಸು ನೀಡಿದ್ದು ಹರೇಕಳ ಪಂಚಾಯತ್ ಪಿಡಿಒ ರಜೆಯಲ್ಲಿದ್ದ ಕಾರಣ ಕಟೌಟ್ ತೆರವು ಆಗಿಲ್ಲ.
ಹರೇಕಳ ಡಿವೈಎಫ್ ಐ ಕಚೇರಿ ಬಳಿಯಲ್ಲೇ ಕಾರ್ಡ್ ಬೋರ್ಡ್ನಿಂದ 6 ಅಡಿ ಉದ್ದದ ಟಿಪ್ಪು ಸುಲ್ತಾನ್ ಕಟೌಟ್ ನಿರ್ಮಿಸಲಾಗಿದೆ.ಕಟೌಟ್ ತೆರವುಗೊಳಿಸಲು ಮುಂದಾದ ಕೊಣಾಜೆ ಪೊಲೀಸರ ವಿರುದ್ಧ ಡಿವೈಎಪ್ ಐ ಜಿಲ್ಲಾಧ್ಯಕ್ಷ ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದ್ದು ರಾಜ್ಯದಲ್ಲಿ ಯಾವ ಸರಕಾರ ಇದೆಯೆಂದು ಕಿಡಿಕಾರಿದ್ದಾರೆ.ಟಿಪ್ಪು ,ರಾಣಿ ಅಬ್ಬಕ್ಕ ಸೇರಿದಂತೆ ಯಾರೊಬ್ಬರ ಕಟೌಟ್ ತೆರವುಗೊಳಿಸದಂತೆ ಡಿವೈಎಫ್ ಐ ಕಾರ್ಯಕರ್ತರು ಕಾವಲಿರುತ್ತಾರೆಂದು ಇಮ್ತಿಯಾಝ್ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.