ಕಡಬ, ಫೆ 19(DaijiworldNews/AA): ಕೌಕ್ರಾಡಿಯ ವೃದ್ಧ ದಂಪತಿಗೆ ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶ ಬಂದಿದೆ. ಈ ಹಿನ್ನೆಲೆ ವೃದ್ಧ ದಂಪತಿಗೆ ದಯಾಮರಣ ಕರುಣಿಸುವಂತೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ 6 ವರ್ಷದಿಂದ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸರ್ಕಾರಿ ಜಾಗದಲ್ಲಿ ವಾಸವಾಗಿರುವ ರಾಧಮ್ಮ-ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಗೆ ಮನೆ ತೆರವುಗೊಳಿಸುವಂತೆ ಕೋರ್ಟ್ ಆದೇಶಿದೆ. ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದ ದಂಪತಿಗಳು ಕಳೆದ 6 ವರ್ಷಗಳ ಹಿಂದೆ ಕೆಲಸಕ್ಕಾಗಿ ಕೌಕ್ರಾಡಿ ಬಂದಿದ್ದು, ತಮ್ಮದೇ ಆದ ಮನೆ ಕಟ್ಟಿಕೊಂಡಿದ್ದರು. ಈ ಮನೆಕಟ್ಟಲು ತಾವು ಕೂಡಿಟ್ಟ ಸುಮಾರು 50 ಸಾವಿರ ರೂ. ಹಣವನ್ನು ಸ್ಥಳೀಯರೊಬ್ಬರಿಗೆ ನೀಡಿ ಅವರ ವಶದಲ್ಲಿದ್ದ ಸರಕಾರಿ ಜಾಗವನ್ನು ಪಡೆದಿರುತ್ತಾರೆ. ಇನ್ನು ದಂಪತಿ 2 ವರ್ಷಗಳ ಹಿಂದೆ ತಾವು ವಾಸಿಸುತ್ತಿರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಅವರು ಮನೆಯನ್ನು ತೆರವುಗೊಳಿಸುವಂತೆ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಈ ಹಿನ್ನೆಲೆ ಕೋರ್ಟ್ ಮನೆ ತೆರವುಗೊಳಿಸುವಂತೆ ಆದೇಶಿಸಿದೆ. ಈ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯ ಗ್ರಾಮಕರಣಿಕರು ದಂಪತಿಗೆ ಮೌಖಿಕವಾಗಿ ತಿಳಿಸಿ, ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಇನ್ನು ದಂಪತಿಗೆ ನೀಡಿರುವ ನೋಟಿಸ್ ಈಗಾಗಲೇ ಮದುವೆಯಾದ ಮಗಳ ಹೆಸರಲ್ಲಿದೆ. ಅವರಿಗೂ ದಂಪತಿ ವಾಸವಿರುವ ಮನೆಗೂ ದಾಖಲೆಗಳ ಪ್ರಕಾರ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.
ಇನ್ನು ವೃದ್ಧ ದಂಪತಿ ಸಲ್ಲಿಸಿದ ಅರ್ಜಿಯಲ್ಲಿ ’ನಮ್ಮನ್ನು ಆ ಸರಕಾರಿ ಜಾಗದಲ್ಲಿ ತಾವು ಕಟ್ಟಿಕೊಂಡ ಮನೆಯಲ್ಲಿ ಜೀವನ ಸಾಗಿಸಲು ಅವಕಾಶ ನೀಡಿ. ಇಲ್ಲವೇ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ಯಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶ ನೀಡಬೇಕೆಂದು’ ಉಲ್ಲೇಖಿಸಲಾಗಿದೆ.