ಕುಂದಾಪುರ, ಫೆ 18 (DaijiworldNews/ AK): ದೇಶದಲ್ಲಿ ಪಿಯುಸಿವರೆಗೆ ಶಿಕ್ಷಣವನ್ನ ಉಚಿತ ಶಿಕ್ಷಣವೆಂದು ಸರ್ಕಾರ ಘೋಷಿಸಿ ಯಾವುದೇ ಖಾಸಗಿ ಶಾಲೆಗಳಿಲ್ಲದೆ ಕೇವಲ ಸರ್ಕಾರ ಶಾಲೆಗಳನ್ನ ಮಾತ್ರ ಅವಕಾಶ ನೀಡಿದಾಗ ಸಮರ್ಥ ಭಾರತದ ನಿರ್ಮಾಣ ಸಾಧ್ಯ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಅವರು ಸೌದದಲ್ಲಿ ಶನಿವಾರ ನಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಧುರ ಯುವಕ ಮಂಡಲ ಸೌಧ ಇದರ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿ ಸಾಧನೆಗೈದಿರುವ ಹುಟ್ಟೂರಿನ ಅಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ತಾನು ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಣದ ಬಗ್ಗೆ ಪ್ರಥಮ ಆದ್ಯತೆಯನ್ನು ನೀಡಿದ್ದೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಕವಾಗಿ ಮಾದರಿ ಶಾಲೆಗಳನ್ನ ರೂಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದೆ ಶಿಕ್ಷಣ ಎನ್ನುವುದು ಪ್ರತಿ ಮಗುವಿನ ಹಕ್ಕು ಆಗಿರುವುದರಿಂದ ಒಂದನೇ ತರಗತಿಯಿಂದ ಪಿಯುಸಿ ಅಂದರೆ 18ನೇ ವಯಸ್ಸಿನವರೆಗಿನ ಶಿಕ್ಷಣವನ್ನು ಉಚಿತಗೊಳಿಸಿದಾಗ ಪ್ರತಿಯೊಬ್ಬರು ಮೌಲ್ಯಯುತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು ಈ ನಿಟ್ಟಿನಲ್ಲಿ ಇಂದಿಗೂ ನಾನು ಉಚಿತ ಮತ್ತು ಮೌಲ್ಯಯುತ ಶಿಕ್ಷಣದ ಹೋರಾಟಕ್ಕೆ ಬದ್ಧನಿದ್ದೇನೆ ಎಂದರು.
ನಾವು ವೈಜ್ಞಾನಿಕವಾಗಿ ಹವಾಮಾನ ವಿಚಾರದಲ್ಲಿ ಹಿಂದುಳಿದಿದ್ದೇವೆ ಎಂದ ಅವರು ಅತಿ ಮುಂದುವರಿದ ದೇಶಗಳಾದ ಜಪಾನ್ ಮೊದಲಾದ ದೇಶಗಳಲ್ಲಿಯೂ ಹವಾಮಾನ ಮುನ್ಸೂಚನೆ ಪಡೆಯುವಲ್ಲಿ ವಿಫಲವಾಗಿದ್ದೇವೆ ಹಲವು ಬಾರಿ ತೀವ್ರ ಭೂಕಂಪ ಬಿರುಗಾಳಿ ಚಂಡಮಾರುತಗಳಿಗೆ ವೈಜ್ಞಾನಿಕ ಉತ್ತರ ಸಿಗದೇ ಕೊಚ್ಚಿಕೊಂಡು ಹೋಗಿರುವುದನ್ನ ಕಂಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಸಾಕಷ್ಟು ಅಧ್ಯಯನಗಳನ್ನು ಮಾಡಬೇಕಿದೆ ಎಂದರು.
ಇದೇ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಸಹ ನಿರ್ದೇಶಕರಾಗಿದ್ದ ಹೆಚ್. ದಿವಾಕರ ಶೆಟ್ಟಿ ಸೌಡ ಹಾಗೂ ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಹೆರಡೆಜೆಡ್ಡು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್ ಆರ್ , ಸೌದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಣಿ ಆರ್ ಅಡಿಗ, ಅಧ್ಯಕ್ಷ ಎಸ್ ಉದಯ್ ಐತಾಳ್ ಉಪಸ್ಥಿತರಿದ್ದರು.
ವಿಘ್ನೇಶ್ವರ ಐತಾಳ್ ಸ್ವಾಗತಿಸಿದರು. ಮಧುರ ಯುವಕ ಮಂಡಲದ ಗೌರವಾಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಂಜಿತ್ ಸೌಡ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.