ಕುಂದಾಪುರ, ಫೆ 17(DaijiworldNews/AK): ಹೆದ್ದಾರಿ ದಾಟಲು ಸಮಸ್ಯೆಯಾಗುತ್ತಿದ್ದು, ಪಾದಚಾರಿ ಕಾಲುಸೇತುವೆ ಬೇಕಾಗಿದೆ. ಉಪ್ಪಿನಕುದ್ರುವಿನಲ್ಲಿ ಉಪ ಗ್ರಂಥಾಲಯ ಬೇಕು. ಆಟದ ಮೈದಾನದ ಹತ್ತಿರವೇ ಅಪಾಯಕಾರಿ ಕೆರೆಯಿದೆ. ನೀರು, ಬೀದಿ ದೀಪ ಸಮಸ್ಯೆ, ಹೆಣ್ಣು ಮಕ್ಕಳಿಗೆ ರಕ್ಷಣೆಗಾಗಿ ಕರಾಟೆ ಕಲಿಸಬೇಕು.ಇದು ಶನಿವಾರ ಜಿ.ಪಂ. ಉಡುಪಿ, ತಾ.ಪಂ. ಕುಂದಾಪುರ, ತಲ್ಲೂರು ಗ್ರಾ.ಪಂ. ಹಾಗೂ ನಮ್ಮ ಭೂಮಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ತಲ್ಲೂರಿನ ಪಾರ್ತಿಕಟ್ಟೆಯ ಶೇಷಕೃಷ್ಣ ಕನ್ವೆನ್ಶನ್ ಹಾಲ್ನಲ್ಲಿ ನಡೆದ ಮಕ್ಕಳ ಹಬ್ಬದಲ್ಲಿ ಮಕ್ಕಳು ಪ್ರಸ್ತಾಪಿಸಿದ ಅಹವಾಲುಗಳು ಹಾಗೂ ಸಮಸ್ಯೆಗಳ ಪಟ್ಟಿ.
ಅಹವಾಲು ಸ್ವೀಕರಿಸಿ ಮಾತನಾಡಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ, ಮಕ್ಕಳು ಮಂಡಿಸಿದ ಈ ಎಲ್ಲ ಸಮಸ್ಯೆಗಳನ್ನು ತಾಲೂಕು ಆಡಳಿತ, ಗ್ರಾ.ಪಂ. ಗಂಭೀರವಾಗಿ ಪರಿಗಣಿಸಿ, ಪರಿಹರಿಸಲು ಪ್ರಯತ್ನಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದ ಅವರು, ಈ ಮಕ್ಕಳ ವಿಶೇಷ ಗ್ರಾಮಸಭೆಯು ಮಕ್ಕಳ ಆರೋಗ್ಯ, ಬೌದ್ಧಿಕ ಬೆಳವಣಿಗೆ, ಕಡ್ಡಾಯ ಶಿಕ್ಷಣ, ಹೆಣ್ಣು ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ತಡೆ, ಜೀತ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ತಲ್ಲೂರು, ಉಪ್ಪಿನಕುದ್ರು ಶಾಲೆಗಳು, ಕೋಟೆಬಾಗಿಲು ಶಾಲೆ ವಿದ್ಯಾರ್ಥಿಗಳು, ಜಯರಾಣಿ ಆ. ಮಾ. ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ತಲ್ಲೂರು ಗ್ರಾ.ಪಂ. ಅಧ್ಯಕ್ಷ ಗಿರೀಶ್ ನಾಯ್ಕ್ ಅಹವಾಲು ಸ್ವೀಕರಿಸಿ ಮಾತನಾಡಿದರು.
ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್, ಸದಸ್ಯರಾದ ಸಂಜೀವ ದೇವಾಡಿಗ, ಕೃಷ್ಣ ಪೂಜಾರಿ, ರಾಧಾಕೃಷ್ಣ ಶೇರುಗಾರ್, ಚಂದ್ರ ದೇವಾಡಿಗ, ಶಿವರಾಮ ಕೊಠಾರಿ, ಅಕ್ಷಯ್, ಸರೋಜಾ, ಸುಶೀಲಾ, ರುಕ್ಮಿಣಿ, ಲಕ್ಷ್ಮಿ, ಮಾಜಿ ಸದಸ್ಯರಾದ ಜಯಲಕ್ಷ್ಮಿ ಕೊಠಾರಿ, ನಮ್ಮ ಭೂಮಿ ಸಂಸ್ಥೆಯ ಆಶಾ, ಬಂದೂರು ಬಿಇಒ ನಾಗೇಶ್ ನಾಯ್ಕ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಕ್ರೀಡಾಽಕಾರಿ ಕುಸುಮಾಕರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ರಮೇಶ್ ಕುಲಾಲ್, ತಾಲೂಕು ವೈದ್ಯಾಧಿಕಾರಿ ಡಾ| ಪ್ರೇಮಾನಂದ್, ಗಂಗೊಳ್ಳಿವೈದ್ಯಾಧಿಕಾರಿ ಡಾ| ಅಮಿತಾ, ಸಿಡಿಪಿಒ ಅನುರಾಧ, ಕುಂದಾಪುರ ಎಸ್ಐ ವಿನಯ ಕೊರ್ಲಹಳ್ಳಿ, ಕಾರ್ಯದರ್ಶಿ ರತ್ನಾ, ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಭೂಮಿಯ ಪರಮೇಶ್ವರ ಗಾಣಿಗ ಪ್ರಸ್ತಾವಿಸಿ, ಗ್ರಾ.ಪಂ. ಪಿಡಿಒ ನಾಗರತ್ನ ವರದಿ ಮಂಡಿಸಿದರು. ಸದಸ್ಯೆ ಜುಡಿತ್ ಮೆಂಡೋನ್ಸಾ ನಿರೂಪಿಸಿದರು.