ಮಂಗಳೂರು, ಫೆ 17(DaijiworldNews/AA): ನಾನು ಚುನಾವಣೆ ವೇಳೆ ಒಂದು ಮಾತು ಹೇಳುತ್ತಿದ್ದೆ. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ರಾಜ್ಯ ಸಮೃದ್ಧಿ, ಪ್ರಗತಿಯಾಯಿತು. ಇದು ನಿಮ್ಮೆಲ್ಲರ ಶಕ್ತಿಯಲ್ಲವೇ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನರು ಕಾಂಗ್ರೆಸ್ ಗೆ ಅಧಿಕಾರ ನೀಡಿದ ನಂತರ ನಾವು ನುಡಿದಂತೆ ನಡೆದಿದ್ದೇವೆ. ನಾವು ಹೇಳಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮೂಲಕ ಜನರಿಗೆ ಶಕ್ತಿ ನೀಡಿದ್ದೇವೆ. ನಮ್ಮ ಯೋಜನೆ ಜಾರಿಯಾಗಿರುವುದರಿಂದ ಮಂಗಳೂರಿನಲ್ಲಿರುವ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಜನರ ಬಳಿ ಮತಯಾಚಿಸಬಹುದು. ದೇಶದಲ್ಲಿನ ಯಾವುದೇ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಪ್ಪು ಹಣ ತಂದು 15 ಲಕ್ಷ ರೂಪಾಯಿ ಕೊಡುವುದಾಗಿ ತಿಳಿಸಿದ್ದರು. ಎಲ್ಲಾ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ. ಪ್ರತಿ ವರ್ಷವೂ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದ್ದರು. ಆದರೆ ಅವರು ಹೇಳಿದ ಹಾಗೆ ಮಾಡಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ತಿಳಿಸಿದರು.