ಮಂಗಳೂರು, ಫೆ 17(DaijiworldNews/AA): ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಚುನಾವಣೆಯೇ ನಡೆಯುವುದಿಲ್ಲ. ಸರ್ವಾಧಿಕಾರ ಬರುತ್ತದೆ. ಪ್ರಧಾನಿ ಮೋದಿ ಅವರನ್ನು ಶಕ್ತಿಶಾಲಿಯಾಗಿ ಮಾಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ದುಡ್ಡು ಎಷ್ಟು ಬರಬೇಕು ಅದು ಬರುತ್ತಿಲ್ಲ. ನಮ್ಮ ಪಾಲಿನ ಹಣ ಸಿಗುತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಮ್ಮ ಮೊದಲ ಗ್ಯಾರಂಟಿ ಎಂಎಸ್ ಪಿ ಖಾತರಿ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸುತ್ತೇವೆ. ಇವತ್ತು ಕೆಲ ಪಕ್ಷಗಳು ನಮ್ಮನ್ನು ಹೊಡೆಸಿ ಸತತವಾಗಿ ಆಡಳಿತ ನಡೆಸಲು ಹೊರಟಿದ್ದಾರೆ. ಮೋದಿ ಏನಾದ್ರೂ ಜಮೀನು ನೀಡಿದ್ರಾ? ಅವರು ಹೇಳಿದ ಕೆಲಸ ನಿಮಗೆ ಸಿಕ್ಕಿತಾ? ನಾವು 6 ಗ್ಯಾರೆಂಟಿಗಳನ್ನು ನೀಡಿ ಇಂದು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ನೀವು ಓಡಾಡುವ ಸೇತುವೆ ಆಗಿದ್ದು ನಮ್ಮ ಕಾಲದಲ್ಲಿ. ಇಷ್ಟೊಂದು ನೀಡಿದ್ದರೂ ಅವರೇ ನಮ್ಮ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಪಕ್ಷದವರ ಮಾತು ಕೇಳಿ ಇಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದಾರೆ. ಹಿಂದೆ ಮಾಡಿರುವ ಗ್ಯಾರಂಟಿ ಮರೆತರೂ, ಆದರೆ ಈಗಿನ ಗ್ಯಾರಂಟಿಯನ್ನಾದರೂ ನೆನಪಿಟ್ಟೂಕೊಳ್ಳಿ ಎಂದು ಅವರು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಮೋದಿ ಅವರು ಎಚ್ಚರವಾಗಿದ್ದಾರೆ. ನಾನ್ಯಾಕೆ ಕೊಡಬಾರದೆಂದು ಮೋದಿ ಅವರು ಗ್ಯಾರಂಟಿ ಕೊಡುತ್ತಿದ್ದಾರೆ. ಆದರೆ ಅವರ ಯಾವ ಗ್ಯಾರಂಟಿಯು ಈಡೇರಿಲ್ಲ. ನಾವ್ಯಾರೂ ಸಿದ್ದರಾಮಯ್ಯ ಗ್ಯಾರಂಟಿ ಎಂದು ಹೇಳುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎಂದು ಹೇಳ್ತೇವೆ. ಆದರೆ ಮೋದಿ ಅವರು ಬಿಜೆಪಿ ಗ್ಯಾರಂಟಿ ಎಂದು ಹೇಳಲ್ಲ. ಬದಲಾಗಿ ಮೋದಿ ಗ್ಯಾರಂಟಿ ಎಂದು ಹೇಳ್ತಾರೆ ಎಂದರು.