ಮಂಗಳೂರು, ಫೆ 17(DaijiworldNews/AA): ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವು ಮಂಗಳೂರು ಅಡ್ಯಾರ್ ನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಇಂದು ನಡೆಯುತ್ತಿದೆ. ಈ ಹಿನ್ನೆಲೆ ವಿಮಾನ ನಿಲ್ದಾಣ ರಸ್ತೆಯ ಬೋಂದೆಲ್ ಬಳಿ ಮಂಗಳೂರು ಉತ್ತರ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಭಿತ್ತಿ ಪತ್ರ ಪ್ರದರ್ಶಿಸಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಶಾಸಕ ಭರತ್ ಶೆಟ್ಟಿ ಹಾಗೂ ವೇದವ್ಯಾಸ್ ಕಾಮತ್ ಅವರ ಮೇಲೆ ವಿನಾಕಾರಣ ಎಫ್ ಐಆರ್ ದಾಖಲಿಸಲಾಗಿದೆ ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸರು ಯಾವುದೇ ತೊಂದರೆ ಉಂಟು ಮಾಡದಂತೆ ಸೂಚನೆ ನೀಡಿದ್ದಾರೆ. ಈ ಪ್ರತಿಭಟನೆ ನಡೆಸಲು ನಮ್ಮಿಂದ ಯಾವುದೇ ರೀತಿಯಾದ ಅನುಮತಿ ಕೇಳಿಲ್ಲ. ಅಲ್ಲದೇ ನಾವು ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದರು. ಆ ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ಕೈಬಿಡಬೇಕಾಯಿತು. ಪ್ರತಿಭಟನೆಯನ್ನು ಕೈ ಬಿಟ್ಟರೂ ಕಾರ್ಯಕರ್ತರು ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡದೇ ಪ್ರತಿಭಟನೆ ಮಾಡಲು ನಮಗೆ ಎಲ್ಲಾ ಮೂಲಭೂತ ಹಕ್ಕುಗಳಿವೆ. ಕಾಂಗ್ರೆಸ್ ಪಕ್ಷದಿಂದ ಆಗುತ್ತಿರುವ ಅನ್ಯಾಯಗಳಿಗೆ ನಾವು ಅನುಮತಿ ನೀಡುವುದಿಲ್ಲ" ಎಂದು ಕಾರ್ಯಕರ್ತರು ಹೇಳಿದರು.
ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮನವೊಳಿಕೆಗೆ ಯತ್ನಿಸಿದರು. ಆದರೆ ಬಳಿಕ ಪರಿಸ್ಥಿತಿ ಕೈಮೀರಿದ್ದು, ಹಿನ್ನೆಲೆ ಪೊಲೀಸ್ ಆಯುಕ್ತರು ಎಲ್ಲರನ್ನೂ ಬಂಧಿಸುವಂತೆ ಆದೇಶಿಸಿದರು.