ಉಳ್ಳಾಲ, ಫೆ 17 (DaijiworldNews/HR): ಬೈಕ್ನಲ್ಲಿ ಚಲಿಸುತ್ತಿದ್ದ ಯುವಕನ ತಡೆದು ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ರಾ.ಹೆ.66 ರ ಕೊಲ್ಯ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಕುಂಪಲ ನಿವಾಸಿ ಮಹಮ್ಮದ್ ಆರೀಫ್(29) ಇರಿತಕ್ಕೊಳಗಾದ ಯುವಕ.
ಆರೀಫ್ ಶುಕ್ರವಾರ ಬೆಳಿಗ್ಗೆ ಕೊಲ್ಯದಿಂದ-ಕುಂಪಲದ ಕಡೆಗೆ ಹೆದ್ದಾರಿಯಲ್ಲಿ ವಿರುದ್ಧ ಧಿಕ್ಕಲ್ಲಿ ಸಂಚರಿಸುತ್ತಿದ್ದ ವೇಳೆ ಕುಂಪಲದಿಂದ-ಕೊಲ್ಯ ಕಡೆಗೆ ಬೈಕಿನಲ್ಲಿ ಧಾವಿಸುತ್ತಿದ್ದ ಮುಝಮ್ಮಿಲ್ ಮತ್ತು ನಿಸಾರ್ ಎಂಬ ಇಬ್ಬರು ಆರೀಫ್ ನನ್ನು ಕೊಲ್ಯ ಎಂಬಲ್ಲಿ ತಡೆದಿದ್ದಾರೆ. ಆರೋಪಿಗಳು ಆರೀಫ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮುಝಮ್ಮಿಲ್ ಚೂರಿಯಿಂದ ಇರಿಯಲು ಯತ್ನಿಸಿದ ಸಂದರ್ಭ ಆರೀಫ್ ತಪ್ಪಿಸಿಕೊಂಡು ಹೋಗದಂತೆ ನಿಸಾರ್ ಅಡ್ಡಗಟ್ಟಿದ್ದ. ಇದರಿಂದ ಆರೀಫ್ ರವರ ಬೆನ್ನಿಗೆ ಗಾಯವಾಗಿದ್ದು, ತಕ್ಷಣ ಅವರು ಘಟನಾ ಸ್ಥಳದಿಂದ ತಪ್ಪಿಸಿಕೊಂಡಿದ್ದು,ಆರೋಪಿಗಳೂ ಪರಾರಿಯಾಗಿದ್ದಾರೆ.
ಇನ್ನು ಗಂಭೀರ ಗಾಯಗೊಂಡಿದ್ದ ಆರೀಫ್ ಅವರನ್ನು ಸ್ಥಳದಲ್ಲಿದ್ದ ಶ್ರವಣ್ ಮತ್ತು ಉತ್ತಮ್ ಎಂಬ ಇಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಿಸಿ ಕೃತ್ಯ ಎಸಗಿದ ಪ್ರಮುಖ ಆರೋಪಿ ಮುಝಮ್ಮಿಲ್ ನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ನಿಝಾರ್ ನ ಪತ್ತೆಗಾಗಿ ಬಲೆ ಬೀಸಿದ್ದಾರೆ.