ಮಂಗಳೂರು,ಏ 27(Daijiworld News/MSP): ಕರ್ನಾಟಕ ಸರಕಾರದ ಆಡಿಟ್ ಆ್ಯಂಡ್ ಅಕೌಂಟ್ಸ್ ವಿಭಾಗದ ಅಸಿಸ್ಟೆಂಟ್ ಅಕೌಂಟ್ ಆಫೀಸರ್ ಬೆಂಗಳೂರಿನ ಲೋಕೇಶ್ (50) ಅವರು ಸುರತ್ಕಲ್ ನಲ್ಲಿ ಕಾಲೇಜು ಪ್ರಾಂಶುಪಾಲರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅವರಿಂದ ಲಂಚ ಪಡೆದ 2.50 ಲಕ್ಷ ರೂಪಾಯಿ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದು, ಅವರಿಗೆ ಆಡಿಟ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕಿತ್ತು. ಆದರೆ ಅದನ್ನು ನೀಡಬೇಕಾದರೆ 2.50 ಲ.ರೂ. ಲಂಚ ನೀಡ ಬೇಕೆಂದು ಲೋಕೇಶ್ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಪ್ರಾಂಶುಪಾಲರು ಎಸಿಬಿಗೆ ದೂರು ನೀಡಿದ್ದರು.
ಬಳಿಕ ಅಧಿಕಾರಿಗಳು ನೀಡಿದ್ದ ಸೂಚನೆಯಂತೆ, ಲಂಚದ ಹಣ ನೀಡುವುದಾಗಿ ಹೇಳಿದ ಪ್ರಾಂಶುಪಾಲರು ಅಧಿಕಾರಿ ಲೋಕೇಶ್ ಅವರನ್ನು ಮಂಗಳೂರಿಗೆ ಬರುವಂತೆ ಹೇಳಿದ್ದರು. ಅದರಂತೆ ಲೋಕೇಶ್ ತನ್ನ ಖಾಸಗಿ ವಾಹನದಲ್ಲಿ ಶುಕ್ರವಾರ ಬೆಂಗಳೂರಿನಿಂದ ಬಂದು ಸುರತ್ಕಲ್ಲಿನ ಹೊಟೇಲ್ ನಲ್ಲಿ ತಂಗಿದ್ದರು. ಮಧ್ಯಾಹ್ನ ವೇಳೆ ಕಾಲೇಜು ಪ್ರಾಂಶುಪಾಲರು ಹೊಟೇಲ್ ಗೆ ತೆರಳಿದ್ದು, ಆರೋಪಿ 2.50 ಲ. ರೂ.ಲಂಚದ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದರು.