ಉಳ್ಳಾಲ, ಫೆ 15 (DaijiworldNews/MS): ಕೋರೆಗಳಿಗೆ ಲೈಸನ್ಸ್ ಕೊಡಿಸಿ ಭೂಕಬಳಿಕೆಯಲ್ಲಿ ಭಾಗಿಯಾಗಿರುವ ಬಾಳೆಪುಣಿ ಗ್ರಾ.ಪಂ ಸದಸ್ಯ, ಜನರಿಗೆ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಡಿವೈಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ರಝಾಕ್ ಮೊಂಟೆಪದವು ಆರೋಪಿಸಿದ್ದಾರೆ.
ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನವಗ್ರಾಮ ಸೈಟ್ ಮತ್ತು ಕುಕ್ಕುದಕಟ್ಟೆ ನಿವಾಸಿಗಳಿಗೆ ಸಮರ್ಪಕ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಡಿವೈಎಫ್ ಐ ಹಾಗೂ ಸ್ಥಳೀಯ ಮಹಿಳೆಯರ ನೇತೃತ್ವದಲ್ಲಿ ಬಾಳೆಪುಣಿ ಗ್ರಾ.ಪಂ ಕಚೇರಿ ಎದುರುಗಡೆ ಕೊಡ ಹಿಡಿದು ಪ್ರತಿಭಟನೆ ನಡೆಯಿತು.
ಎರಡು ದಿನಗಳಿಗೆ ಬರುವ ನೀರು ಸಮರ್ಪಕವಾಗಿ ಪೂರೈಕೆಯಾಗದೆ ಜನ ತೊಂದರೆಕ್ಕೀಡಾಗಿದ್ದರೂ, ಗ್ರಾ.ಪಂ ಸದಸ್ಯರು ಗ್ರಾಮಸ್ಥರ ತೊಂದರೆಗಳಿಗೆ ಕಿವಿಗೊಡುತ್ತಿಲ್ಲ. ಕುಡಿಯಲು ಬಿಡಿ ಮಹಿಳೆಯರು, ಮಕ್ಕಳು ದೈನಂದಿನ ಚಟುವಟಿಕೆ ನಡೆಸದೆ ಬದುಕುವುದಾದರೂ ಹೇಗೆ?, ನವಗ್ರಾಮ ಸೈಟ್ , ಕುಕ್ಕುದಕಟ್ಟೆಯಲ್ಲಿ ಕುಡಿಯಲು ನೀರು ಕೇಳಿದರೂ ಮನೆಮಂದಿಗೆ ಕೊಡಲಾಗದ ಸ್ಥಿತಿಯಿದೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸದೇ ಇರುವುದು ಖೇದಕರ. ಮೂಲಭೂತ ಸೌಕರ್ಯಗಳಲ್ಲಿ ಇನ್ನೊಂದಾದ ರಸ್ತೆ ಕೂಡಾ ವಾಹನಗಳು ಓಡಾಡದ ಸ್ಥಿತಿಯಲ್ಲಿವೆ. ಅರ್ಧ ಡಾಮರೀಕರಣ, ಕಾಂಕ್ರೀಟಿಕರಣ ನಡೆಸಿ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲಾಗಿದೆ. ಬಾಳೆಪುಣಿ ಗ್ರಾ.ಪಂ ಸದಸ್ಯರು ಭೂಕಬಳಿಕೆಯಲ್ಲಿ ನಿರತರಾಗಿದ್ದು, ಕೋರೆಗಳನ್ನು ಆರಂಭಿಸಿ ಸರಕಾರಿ ಜಮೀನಿನ ಕಬಳಿಕೆಯಲ್ಲಿ ನಿರತರಾಗಿದ್ದಾರೆ. ಕುಕ್ಕುದಕಟ್ಟೆ ನವಗ್ರಾಮ ಸೈಟ್ ನ ನಿವಾಸಿಗಳು ತೊಂದರೆ ಅನುಭವಿಸುತ್ತಲೇ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಪರಿಹಾರ ಸಿಗದೇ ಇದ್ದಲ್ಲಿ ಗೇಟಿಗೆ ಬೀಗ ಹಾಕಿ ಉಗ್ರ ರೀತಿಯಲ್ಲಿ ಪ್ರತಿಭಟಿಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಉಪಾಧ್ಯಕ್ಷರಾದ ರಝಾಕ್ ಮುಡಿಪು, ಮುಡಿಪು ಡಿವೈಎಫ್ ಐ ಕಾರ್ಯದರ್ಶಿ ನಿಸಾರ್ ಮುಡಿಪು, ಉಪಾಧ್ಯಕ್ಷೆ ತೌಸೀಮ, ಹುಸೈನ್ ಮೊಂಟೆಪದವು, ಮಾಧವಿ, ತುಳಸಿ, ಮತ್ತಿತರರು ಉಪಸ್ಥಿತರಿದ್ದರು