ಕಾರ್ಕಳ,ಫೆ 15 (DaijiworldNews/MS): ನಕ್ಸಲ್ ಚಳುವಳಿಗಾರ್ತಿ ಶ್ರೀಮತಿ ಅಲಿಯಾಸ್ ಉಣ್ಣಿಯಮ್ಮ(28) ಎಂಬಾಕೆಯನ್ನು ಪೊಲೀಸರು ಕೇರಳದಲ್ಲಿ ಬಂಧಿಸಿ ಕಾರ್ಕಳದ ಘನನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಿದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ ಆಕೆ ಸಿಪಿಐ ಮಾವೋವಾದಿ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾಳೆ.
ಬುಧವಾರ ದಂದು ಮೊಟ್ಟಮೊದಲಾಗಿ ಶ್ರೀಮತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರಾದರೂ 2011ರ ನ. 19ರಂದು ಹೆಬ್ರಿಯ ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಸದಾಶಿವ ಗೌಡರನ್ನು ಅಪಹರಿಸಿ, ಕೊಲೆಗೈದ ತಂಡದಲ್ಲಿ ಶ್ರೀಮತಿ ಆರೋಪಿಯಾಗಿದ್ದಳು. ನಂತರದ ದಿನಗಳಲ್ಲಿ ನಕ್ಸಲ್ ತಂಡದೊಂದಿಗೆ ಸಕ್ರಿಯಾಗೊಂಡಿದ್ದ ಆಕೆ ವಿವಿದೆಡೆಗಳಲ್ಲಿ ಪ್ರಚಾರ ಕಾರ್ಯ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಪಶ್ಚಿಮಘಟ್ಟ ತಪ್ಪಲು ಹಾಗೂ ಅದರ ಅಸುಪಾಸುಗಳಲ್ಲಿ ವರ್ಷ ಕಳೆಯುತ್ತಿದ್ದಂತೆ ನಕ್ಸಲ್ ಚಳುವಳಿ ಕ್ಷೀಣಿಸಿಕೊಂಡಿದ್ದು, ಚಳುವಳಿಗೆ ಬೆಂಬಲಿಸಿದವರು ಮುಖ್ಯವಾಹಿನಿಗೆ ಸೇರಿರುವ ಹಿನ್ನಲೆಯಲ್ಲಿ ಆಕೆ ಸಹಿತ ಆನೇಕ ನಕ್ಸಲ್ ಹೋರಾಟಗಾರರು ತಲೆ ಮರೆಸಿಕೊಂಡರು.
ಕರ್ನಾಟಕ, ಕೇರಳ, ತಮಿಳುನಾಡು ಗಡಿಭಾಗದಲ್ಲಿ ಸಕ್ರಿಯಾ ವಾಗಿ ಚಳುವಳಿಯನ್ನು ಆರಂಭಿಸಿದ ತ್ರಿರಾಜ್ಯ ದ ನಕ್ಸಲ್ ಮುಖಂಡರು ಅದೇ ಪ್ರದೇಶವನ್ನು ತಮ್ಮ ಕೇಂದ್ರತಾಣವಾಗಿ ಮಾರ್ಪಡು ಮಾಡಿದರು.
2023 ನವಂಬರ್ 23ರಂದು ಶ್ರೀಮತಿ ಹಾಗೂ ಇತರರು ಕೇರಳ ಪೊಲೀಸರ ಬಂಧನದಲ್ಲಿ ಇದ್ದು, ಜೈಲು ಸೇರಿದ್ದರು. ಫೆ.13ರ ರಾತ್ರಿ ಡಿವೈಎಸ್ಪಿ ಅರವಿಂದ್ ಎನ್. ಕಲಗುಜ್ಜಿ ಅವರ ನೇತೃತ್ವದ ತಂಡ ಶ್ರೀಮತಿಯನ್ನು ಕೇರಳದಿಂದ ಬಿಗುಪೊಲೀಸ್ ಪಹರೆಯೊಂದಿಗೆ ಕಾರ್ಕಳ ಕರೆದುಕೊಂಡು ಬಂದಿದ್ದರು.
ವಿಚಾರಣೆ ಪೂರ್ಣಗೊಂಡ ಬಳಿಕ ಮತ್ತೇ ನ್ಯಾಯಾಲಯಕ್ಕೆ ಶ್ರೀಮತಿಯನ್ನು ಪೊಲೀಸರು ಹಾಜರು ಪಡಿಸಿದ್ದರು. ಆರೋಪಿ ಶ್ರೀಮತಿಗೆ ಮಂಗಳೂರು ಸಬ್ ಜೈಲ್ ಗೆ ಕಳುಹಿಸಿ ಅದೇಶವನ್ನು ನ್ಯಾಯಧೀಶರು ಹೊರಡಿಸಿದ್ದಾರೆ.
ಬಾಡಿ ವಾರೆಂಟ್ ಗಾಗಿ ಬಂದು ಹಿಂತಿರುಗಿದ ಶೃಂಗೇರಿ ಪೊಲೀಸರು
ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಶ್ರೀಮತಿಯ ವಿರುದ್ಧ ಪ್ರಕರಣಗಳಿದ್ದು ಇದೇ ಕಾರಣದಿಂದಾಗಿ ಶೃಂಗೇರಿಯ ಪೊಲೀಸರು ಬಾಡಿವಾರೆಂಟ್ ಗಾಗಿ ಕಾರ್ಕಳ ನ್ಯಾಯಾಲಯಕ್ಕೆ ಬಂದಿದ್ದರಾದರೂ, ಕಾನೂನು ಪ್ರಕ್ರಿಯ ತೊಡಕಿನಿಂದಾಗಿ ಬರಿಕೈಯಲ್ಲಿ ಹಿಂತಿರುಗಬೇಕಾದ ಪ್ರಸಂಗ ನಡೆದಿದೆ.