ಉಳ್ಳಾಲ, ಏ 26 (Daijiworld News/SM): ಸಮುದ್ರಪಾಲಾಗುತ್ತಿದ್ದ ಮೈಸೂರು ಮೂಲದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿರುವ ಘಟನೆ ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದಿದೆ. ಉಳ್ಳಾಲದ ಜೀವರಕ್ಷಕ ಈಜುಗಾರರ ಸಂಘ ಕಾರ್ಯಾಚರಣೆ ನಡೆಸಿ ಮಹಿಳೆಯರನ್ನು ರಕ್ಷಿಸಿದೆ.
ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ಶುಕ್ರವಾರ ಸಂಜೆ ಮಹಿಳೆಯರು ಬೀಚ್ ವಿಹಾರಕ್ಕೆ ಬಂದಿದ್ದರು. ಸಮುದ್ರ ತೀರದಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಪ್ರವಾಸಿಗರು ಹೆಚ್ಚಾಗುತ್ತಿರುವುದನ್ನು ಕಂಡು ಸಮುದ್ರ ಕಿನಾರೆಗೆ ತೆರಳದಂತೆ ಜೀವರಕ್ಷಕರು ಎಚ್ಚರಿಕೆ ನೀಡಿದ್ದರು. ಆದರೆ, ಅವರ ಮಾತನ್ನು ಕೇಳದ ಪ್ರವಾಸಿಗರು ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರು ನೀರುಪಾಲಾಗುತ್ತಿದ್ದರು. ತಕ್ಷಣ ಅವರನ್ನು ಅಲ್ಲಿದ್ದ ಜೀವರಕ್ಷಕರು ರಕ್ಷಿಸಿದ್ದಾರೆ.
ಕರಾವಳಿ ನಿಯಂತ್ರಣ ದಳದ ಪ್ರಸಾದ್ ಸುವರ್ಣ, ಜೀವರಕ್ಷಕ ಸಂಘದ ಶಶಿಧರ್ ಕರ್ಕೇರ, ನವೀನ್ ಅಮೀನ್, ಜಿತೇಂದ್ರ ಬಂಗೇರ, ಮೋಹನ್ ಪುತ್ರನ್, ಸುರೇಶ್ ನೇತೃತ್ವದ ತಂಡ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿತ್ತು.