ಬಂಟ್ವಾಳ, ಫೆ 13 (DaijiworldNews/HR): ಅಕ್ರಮವಾಗಿ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದ ಎಂಟು ಮಂದಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಎರಡು ಟಿಪ್ಪರ್ ಲಾರಿ ಮತ್ತು ಮರಳನ್ನು ಜಪ್ತಿ ಮಾಡಿದ್ದಾರೆ.
ಲಾರಿಗಳ ಚಾಲಕರಾದ ಸರ್ಫರಾಝ್ ಅಹ್ಮದ್, ಕಿರಣ್, ಮುಹಮ್ಮದ್ ಇಸ್ಮಾಯಿಲ್ ಹಾಗೂ ಮಾಲಕರಾದ ಅಬ್ದುಲ್ ಅಝೀಝ್, ಅವಿಲ್ ಕ್ರಾಸ್ತಾ, ಮುಹಮ್ಮದ್ ಆರಿಫ್ ಟಿಪ್ಪರ್ ಗಳಿಗೆ ಮರಳು ಸರಬರಾಜು ಮಾಡಿದ ಆರೋಪಿಗಳಾದ ವಳಚ್ಚಿಲ್ ನ ಸತ್ತಾರ್ ಮತ್ತು ಅಝರುದ್ದೀನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಸೋಮವಾರ ರಾತ್ರಿ ತಲಪಾಡಿ ಕಡೆಯಿಂದ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ವಳಚ್ಚಿಲ ಎಂಬಲ್ಲಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿಯ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಉಮೇಶ, ಗೋಪಾಲ ಈ ಕಾರ್ಯಾಚರಣೆ ನಡೆಸಿದ್ದಾರೆ.