ಮಂಗಳೂರು, ಎ26(Daijiworld News/SS): ಬಿಸಿಲ ತಾಪ ಮಿತಿಮೀರಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿಗಳು ಬತ್ತಿ ಹೋಗುತ್ತಿದೆ. ಪರಿಣಾಮ, ನೀರಿಗೆ ತತ್ವಾರ ಉಂಟಾಗಿದೆ. ಧಗಧಗಿಸುತ್ತಿರುವ ರಣ ಬಿಸಿಲಿನಿಂದಾಗಿ ಕರಾವಳಿಗರ ಮನೆಗಳ ಬಾವಿಯಲ್ಲೂ ನೀರಿನ ಮಟ್ಟ ಇಳಿಕೆಯಾಗಿದೆ.
ಕರಾವಳಿಯಲ್ಲಿ ತಾಳಿಕೊಳ್ಳಲಾಗದಷ್ಟು ಬಿಸಿಲ ಧಗೆಯಿದೆ. ಒಂದೆರಡು ಮಳೆ ಹನಿ ಹಾಕಿದ್ದರೂ ಬೇಸಗೆಯ ಬಿಸಿಲಿನ ಬೇಗೆ ಕರಾವಳಿಯಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ. ಈ ನಡುವೆ ಕುಡಿಯುವ ನೀರಿನ ಬರ ಎದುರಾಗಿದೆ. ದಕ್ಷಿಣ ಕನ್ನಡಕ್ಕೆ ಜೀವನದಿಯಾಗಿರುವ ನೇತ್ರಾವತಿ ತನ್ನ ಹರಿವನ್ನು ನಿಲ್ಲಿಸಿದ್ದಾಳೆ. ಒಡಲನ್ನು ಸ್ವಲ್ಪ ಸ್ವಲ್ಪವೇ ಬರಿದು ಮಾಡಿಕೊಂಡು ರಣ ಬಿಸಿಲಿಗೆ ಮೈ ಒಡ್ಡಿದ್ದಾಳೆ. ನೇತ್ರಾವತಿಯು ದಿನೇ ದಿನೆ ಬತ್ತುತ್ತಿದ್ದು, ಇದೀಗ ಜನರಲ್ಲಿ ಆತಂಕ ಮನೆ ಮಾಡಿದೆ.
ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ನೀರಿನ ರೇಷನಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಆಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಷನಿಂಗ್ ಆರಂಭವಾಗಿದೆ.
ಏಪ್ರಿಲ್ ತಿಂಗಳ ಆರಂಭದಲ್ಲೇ ಬಿಸಿಲ ಬೇಗೆ ಮೇರೆ ಮೀರಿತ್ತು. ಸುಡು ಬಿಸಿಲಿನ ಪರಿಣಾಮ ನದಿಗಳಲ್ಲಿ ನೀರು ಆವಿಯಾಗುತ್ತಿದೆ. ತುಂಬೆ ಡ್ಯಾಂನಲ್ಲಿ 5.37 ಅಡಿ ನೀರಿದೆ. ದಕ್ಷಿಣ ಕನ್ನಡದ ಜೀವ ನದಿ ನೇತ್ರಾವತಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ . ಈ ಹಿನ್ನೆಲೆಯಲ್ಲಿ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಸಂಗ್ರಹವಾಗಿರುವ ನೀರನ್ನು ಪ್ರತಿದಿನ ನೀರು ಪೂರೈಕೆ ಮಾಡಿದರೆ, ಮೇ ತಿಂಗಳಲ್ಲಿ ನೀರಿನ ಅಭಾವ ಕಾಡಲಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಕರಾವಳಿಯಲ್ಲಿ ಮಳೆ ಬಂದು ನೀರಿನ ಪ್ರಮಾಣ ಹೆಚ್ಚಾದರೆ ನೀರು ಪೂರೈಕೆ ನಿರಂತರವಾಗಿ ಇರಲಿದೆ. ಇಲ್ಲವಾದಲ್ಲಿ ಈಗಿನ ರೇಷನಿಂಗ್ ಪ್ರಕ್ರಿಯೆ ಮುಂದುವರೆಯಲಿದೆ. ಪ್ರಸ್ತುತ ತುಂಬೆ ವೆಂಟೆಡ್ಡ್ಯಾಂನಲ್ಲಿ ನೀರಿನ ಮಟ್ಟ ಸುಮಾರು 5 ಮೀಟರ್ಗಳಷ್ಟಿದೆ. ಜಿಲ್ಲಾಡಳಿತದ ಪ್ರಕಾರ, ಪ್ರಸ್ತುತ ಇರುವ ನೀರು ಸಂಗ್ರಹದಲ್ಲಿ ರೇಷನ್ ಮೂಲಕ ಗರಿಷ್ಠ ಅಂದರೆ ಜೂನ್ 4ರ ವರೆಗೆ ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡಬಹುದಾಗಿದೆ.
ವಿಶೇಷವೆಂದರೆ ಈ ಬಾರಿ ನೇತ್ರಾವತಿ ನದಿ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ಸಂಗಮಿಸುವ ಸ್ಥಳಕ್ಕೆ 150 ಮೀಟರ್ ಅಂತರ ಇರುವಾಗಲೇ ಹರಿವು ನಿಲ್ಲಿಸಿದೆ. ನೇತ್ರಾವತಿ, ಕುಮಾರಾಧಾರಾ, ಫಲ್ಗುಣಿ ನದಿಗಳಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ ಹಾಗೂ ಪಯಸ್ವಿನಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದರಿಂದ ಕೃಷಿ ಮತ್ತು ದಿನ ಬಳಕೆಗೆ ನೀರಿನ ಅಭಾವ ಕಾಡುವ ಭೀತಿ ಉಂಟಾಗಿದೆ.