ವರದಿ: ಅಹಮ್ಮದ್ ಬಾವ, ಮಂಗಳೂರು
ಮಂಗಳೂರು, ಎ26(Daijiworld News/SS): ಧರ್ಮ ಸಮನ್ವಯತೆಗೆ ಧಕ್ಕೆ ಭರಿಸುತ್ತಾ ಕೋಮು ಗಲಭೆ, ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಕರಾವಳಿಯಲ್ಲಿ ಅದೆಷ್ಟೋ ಹಿಂದೂ - ಮುಸ್ಲಿಂ ಬಾಂಧವರು ಸಹೋದರರಂತೆ ಬದುಕುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳಿಂದ ಹಿಂದೂ - ಮುಸ್ಲಿಂ ಭಾವೈಕ್ಯತೆ ಕರಾವಳಿಯಲ್ಲಿ ಮರೆಯಾಗುತ್ತಿದೆ. ಹೀಗಾಗಿ, ಕಡಲನಗರಿ ಮಂಗಳೂರು ಅಂದರೆ ಬರೀ ಕೋಮುಸಂಘರ್ಷ ಮಾತ್ರ ನೆನಪಿಗೆ ಬರುತ್ತದೆ. ಆದರೆ ಇದೆಲ್ಲವನ್ನೂ ಮೀರಿ ಕರಾವಳಿಯ ಒಂದು ಪುಟ್ಟ ಹಳ್ಳಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಹೋದರರಂತೆ ಬದುಕಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಮಲ್ಲೂರು ಸಮೀಪದ ಉದ್ದಬೆಟ್ಟುವಿನ ಮಸೀದಿಯಲ್ಲಿ ನಡೆದ ಕಾರ್ಯಕ್ರಮವೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಕರಾವಳಿಯಲ್ಲಿ ಎಷ್ಟೇ ಕೋಮು ಸೌಹಾರ್ದತೆ ಹದಗೆಟ್ಟರೂ ಇಲ್ಲಿರುವ ಒಂದು ವರ್ಗ ದೇವಾಲಯದ ಜಾತ್ರೆ - ಮಸೀದಿಯ ಉರೂಸ್ ಸಂದರ್ಭದಲ್ಲಿ ಅದೆಲ್ಲವನ್ನೂ ಮೆಟ್ಟಿ ನಿಂತು ಕೊಡುಕೊಳ್ಳುವಿಕೆಯ ಸಂಬಂಧವಿರಿಸಿಕೊಂಡಿದ್ದಾರೆ.
ಉದ್ದಬೆಟ್ಟುವಿನ ಸಯ್ಯದ್ ಹೈದ್ರೋಸ್ ಜುಮ್ಮಾ ಮಸೀದಿಯಲ್ಲಿ ಸೈಯ್ಯದ್ ಹಸನ್ ಹೈದ್ರೋಸ್ ಅವರ ಪುಣ್ಯಸ್ಮರಣೆ ನಿಮಿತ್ತ ಪ್ರತಿ ಮೂರು ವರ್ಷಕ್ಕೊಮ್ಮೆ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಈ ಹಿಂದಿನಿಂದಲೂ ಊರಿನ ಎಲ್ಲಾ ಧರ್ಮೀಯರು ಪಾಲ್ಗೊಳ್ಳುವುದು ವಿಶೇಷ. ಈ ಬಾರಿ 13 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಸದ್ಯ ಜೀರ್ಣೋದ್ಧಾರ ಸ್ಥಿತಿಯಲ್ಲಿರುವ ಮಲ್ಲೂರು ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಹೊರೆಕಾಣಿಕೆ ನೀಡಲಾಗಿದೆ. ಮಾತ್ರವಲ್ಲದೇ ಅದೆಲ್ಲವನ್ನು ಮೀರಿ ಹಿಂದೂ ಧರ್ಮೀಯರು ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ಮರೆದಿದ್ದಾರೆ.
ಇದು ಈ ಊರಿನಲ್ಲಿರುವ ಇಂದು ನಿನ್ನೆಯ ಸೌಹಾರ್ದತೆ ಅಲ್ಲ, ಹಿಂದಿನ ಕಾಲದಿಂದಲೂ ಬಂದಿರುವ ಬಾಂಧವ್ಯ. ಹಿಂದೂ ಬಾಂಧವರು ಮಸೀದಿಗೆ ಹೊರೆ ಕಾಣಿಕೆ ನೀಡುವುದು, ಮಸೀದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಮಸೀದಿಗೆ ಬಂದು ಸ್ವಯಂ ಸೇವಕರಾಗಿ ಅನ್ನ ಬಡಿಸುವುದು, ರಸ್ತೆ ನಿರ್ಮಾಣ ಸೇರಿದಂತೆ ಸ್ವಚ್ಚತೆಯಲ್ಲೂ ಸಹಕಾರ ನೀಡುತ್ತಿದ್ದಾರೆ.
ಮಲ್ಲೂರಿನಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವೊಂದಿದ್ದು, ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲೂ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವುದು ವಿಶೇಷ. ಮಲ್ಲೂರಿನ ಮುಸ್ಲಿಂ ಬಾಂಧವರು ಜೀರ್ಣೋದ್ಧಾರ ಸ್ಥಿತಿಯಲ್ಲಿರುವ ಮಹಾಲಿಂಗೇಶ್ವರ ದೇವಾಲಯಕ್ಕೂ ಕೊಡುಗೆ ನೀಡಿದ್ದಾರೆ. ಈ ಮೂಲಕ ಮಲ್ಲೂರಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಹೋದರರಂತೆ ಬದುಕುತ್ತಿದ್ದಾರೆ.
ಅನೇಕ ವರುಷಗಳಿಂದ ಹಿಂದೂ ಮುಸ್ಲಿಂ ಬಾಂಧವರು ಸಹೋದರರಂತೆ ಬದುಕುತ್ತಾ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಹಿಂದೂ-ಮುಸ್ಲಿಂ ಯುವಕರ ಬಂಧುತ್ವ, ಸಹೋದರತ್ವ ಹಾಗೂ ಕೋಮು ಸೌಹಾರ್ದತೆ ಇದೀಗ ಎಲ್ಲರಿಗೂ ಮಾದರಿಯಾಗಿದೆ.