ಸುಳ್ಯ, ಫೆ 11 (DaijiworldNews/HR): ನಾಪತ್ತೆಯಾಗಿದ್ದ ಬಾಲಕಿಯನ್ನು ಗಂಟೆಯೊಳಗೆ ಪತ್ತೆಹಚ್ಚಲು ಸಹಕರಿಸಿದ ಮಂಗಳೂರಿನ ಮೂವರು ಪತ್ರಕರ್ತರನ್ನು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಶನಿವಾರ ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರದಲ್ಲಿ ಜರುಗಿದ ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯದಲ್ಲಿ ಸನ್ಮಾನಿಸಿದರು.
ಸುಳ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಸುಳ್ಯದಲ್ಲಿ ನಡೆದ ಪತ್ರಕರ್ತರ ಐದನೇ ಗ್ರಾಮವಾಸ್ತವ್ಯದಲ್ಲಿ ಭಾಗವಹಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್ ಹಾಗೂ ಗಿರೀಶ್ ಮಳಲಿ ಅವರನ್ನು ಸನ್ಮಾನಿಸಿದರು.
ಜೋಯಿಡಾಕ್ಕೆ ಚಾರಣಕ್ಕೆ ಹೊರಟಿದ್ದ ಮಂಗಳೂರಿನ ಪತ್ರಕರ್ತರು ಮೂಲ್ಕಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದಾಗ ಮಗಳು ನಾಪತ್ತೆಯಾಗಿದ್ದಾರೆಂದು ಬಾಗಲಕೋಟ ಮೂಲದ ಕೂಲಿ ಕಾರ್ಮಿಕರೊಬ್ಬರು ಸಾರ್ವಜನಿಕರಲ್ಲಿ ಗೋಗರೆದು ಕಣ್ಣೀರು ಹಾಕುತ್ತಿದ್ದರು. ಇದನ್ನು ಗಮನಿಸಿದ ಪತ್ರಕರ್ತರು ಪ್ರಕರಣದ ಗಂಭೀರತೆ ಅರಿತು ಬಾಲಕಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ತೆರಳಿರುವ ಸುಳಿವಿನ ಆಧಾರದಲ್ಲಿ ಉಡುಪಿ ಎಸ್ಪಿ ಡಾ.ಅರುಣ್ ಕೆ. ಅವರ ಸಹಕಾರದಲ್ಲಿ ಉಡುಪಿ ಸಮೀಪ ಬಾಲಕಿಯನ್ನು ಗಂಟೆಯೊಳಗೆ ಪತ್ತೆಹಚ್ಚಲು ನೆರವಾಗಿದ್ದರು. ಬಳಿಕ ಬಾಲಕಿಯ ಹೆತ್ತವರನ್ನು ತಮ್ಮ ಕಾರಲ್ಲಿ ಕರೆದೊಯ್ದು ಉಡುಪಿ ಸರಕಾರಿ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಅವರ ವಶಕ್ಕೆ ಒಪ್ಪಿಸಿದರು. ಈ ಕ್ರಮಕ್ಕೆ ಉಡುಪಿ ಕೆ ಎಸ್ ಆರ್ ಟಿಸಿ ಕಂಟ್ರೋಲರ್ ರಾಮ್, ಉಡುಪಿ ಎಸ್ಪಿ ಡಾ.ಅರುಣ್ ಶ್ಲಾಘನೆ ವ್ಯಕ್ತಪಡಿಸಿದ್ದರು.