ಈದ್ ಉಲ್ ಅಝ್ಹಾ ಅಂದರೆ ಬಕ್ರೀದ್ ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ಹಬ್ಬ. ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈ ಹಬ್ಬವನ್ನು ಅತ್ಯಂತ ಶೃದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ. ಈದ್ ಉಲ್ ಫಿತ್ರ್ ಮತ್ತು ಈದ್ ಉಲ್ ಅಝ್ಹಾ ಮುಸ್ಲಿಮರು ಆಚರಿಸುವ ಎರಡು ಪವಿತ್ರ ಹಬ್ಬಗಳು. ಈ ಎರಡೂ ಹಬ್ಬಗಳು ಅತ್ಯಂತ ಮಹತ್ವವನ್ನು ಹೊಂದಿದೆ. ಈದ್ ಉಲ್ ಫಿತ್ರ್ಅಂದರೆ ರಂಜಾನ್ ಹಬ್ಬದಲ್ಲಿ ಮುಸ್ಲಿಮರು ಒಂದು ತಿಂಗಳ ಉಪವಾಸವನ್ನು ಮುಗಿಸಿ ಅಲ್ಲಾಹುನನ್ನು ಸ್ತುತಿ ಮಾಡಿದರೆ, ಈದ್ ಉಲ್ಅಝ್ಹಾ ಹಬ್ಬದಲ್ಲಿ ಇಸ್ಲಾಂ ಧರ್ಮದ ಪವಿತ್ರ ಕರ್ತವ್ಯದಲ್ಲಿ ಒಂದಾದ ಹಜ್ಜ್ ಯಾತ್ರೆಗೆ ತೆರಳಿ ಪವಿತ್ರ ಯಾತ್ರ ಸ್ಥಳದ ದರ್ಶನ ಪಡೆದುಅಲ್ಲಾಹುವಿನ ಧಾರ್ಮಿಕ ವಿಧಿ ವಿಧಾನವನ್ನು ಪೂರೈಸಿ ಪಾವನರೆನಿಸಿಕೊಳ್ಳುತ್ತಾರೆ.
ಈದ್ ಉಲ್ ಅಝ್ಹಾ ಅಂದರೆ ಬಕ್ರೀದ್ ಹಬ್ಬದ ಸಮಯ ಮುಸ್ಲಿಮರು ಪ್ರವಾದಿ ಮಹಮ್ಮದ್ನ ಕರ್ಮ ಭೂಮಿಯಾಗಿರುವ ಸೌದಿಅರೇಬಿಯಾದ ಮಕ್ಕಾ ಮತ್ತು ಮದೀನಾ ಪಟ್ಟಣಗಳಲ್ಲಿರುವ ಕಅಬಾ ಶರೀಫ್ ಹಾಗೂ ಪವಿತ್ರ ಯಾತ್ರಾ ಸ್ಥಳಗಳ ದರ್ಶನಪಡೆಯುತ್ತಾರೆ. ಪವಿತ್ರ ಯಾತ್ರಾ ಸ್ಥಳವಾದ ಕಅಬಾದ ದರ್ಶನ ಪಡೆದ ನಂತರ ಸೈತಾನನಿಗೆ ಕಲ್ಲು ಹೊಡೆಯುವ ಒಂದುಸಂಪ್ರದಾಯವನ್ನು ನೆರವೇರಿಸಿ ಕೆಟ್ಟಗುಣಗಳನ್ನು ದೂರ ಮಾಡುವಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುತ್ತಾರೆ.
ಸಾಗರೋಪಾದಿಯಲ್ಲಿ ಯಾತ್ರೆಯನ್ನು ಕೈಗೊಳ್ಳುವ ಮುಸ್ಲಿಮರು ಒಂಭತ್ತು ಹತ್ತು ದಿನಗಳ ಯಾತ್ರೆಯನ್ನು ಪೂರೈಸಿ ಮತ್ತೇ ತಮ್ಮತಮ್ಮ ಊರುಗಳಿಗೆ ಮರಳುತ್ತಾರೆ.
ಹಜ್ಜ್ ಯಾತ್ರೆಯ ಅಂತಿಮ ದಿನದಂದು ಚಂದ್ರ ದರ್ಶನ ಮಾಡಿ ಈದ್ ಉಲ್ ಅಝ್ಹಾ ಅಂದರೆ ಬಕ್ರೀದ್ ಹಬ್ಬ ಆಚರಿಸುತ್ತಾರೆ. ಈ
ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ. ಹಬ್ಬದ ದಿನ ಮುಸ್ಲಿಮರು ಮಸೀದಿಗೆ ತೆರಳಿ ಅಲ್ಲಾಹುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಅಲ್ಲಾಹು ಅಕ್ಬರ್ ಅನ್ನೋ ಒಕ್ಕೊರಳಿನ ಘೋಷಣೆ ಮಸೀದಿಯಲ್ಲಿ ಮುಗಿಲು ಮುಟ್ಟುತ್ತದೆ. ಸರ್ವ ಸ್ತುತಿಯನ್ನು ಅಲ್ಲಾಹನಿಗೆ
ಮೀಸಲಿಡುತ್ತಾರೆ. ಪರಮ ದಯಾಮಯನು ಕರುಣಾನಿಧಿಯೂ ಆಗಿರುವ ಅಲ್ಲಾಹನ ಮುಂದೆ ಭಕ್ತಿಯಿಂದ ತಲೆ ಬಾಗುತ್ತಾರೆ.
ನಮಾಜ್ನ ಬಳಿಕ ಒಬ್ಬರನ್ನೊಬ್ಬರು ಆಲಿಂಗನ ಮಾಡುತ್ತಾರೆ. ಹಬ್ಬ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಅನ್ನೋ ತಿರುಳು ಈ
ಹಬ್ಬದ ಹಿಂದಿರುವ ಒಳ ಅರ್ಥವಾಗಿದೆ.
ಬಕ್ರೀದ್ ಹಬ್ಬದ ಹಿಂದೆ ಸಾವಿರಾರು ವರುಷಗಳ ಕಥೆಯಿದೆ. ಒಮ್ಮೆ ಮಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ ಅವರಿಗೆ
ಅಲ್ಲಾಹು ಪರೀಕ್ಷೆಯನ್ನು ಮಾಡುತ್ತಾರೆ. ಭಕ್ತಿ ನಿಷ್ಠೆಯಿಂದ ಬದುಕುತ್ತಿದ್ದ ಇಬ್ರಾಹಿಂ ಅವರಿಗೆ ಒಬ್ಬನೇ ಮಗ. ಆತನ ಹೆಸರು
ಇಸ್ಮಾಯಿಲ್. ಇಬ್ರಾಹಿಂ ಅವರನ್ನು ಪರೀಕ್ಷಿಸಲು ಅಲ್ಲಾಹು ಮಗನನ್ನು ಬಲಿ ಕೊಡಬೇಕು ಎಂದು ಕನಸಿನಲ್ಲಿ ಇಬ್ರಾಹಿಂ ಅವರಿಗೆ ಆಜ್ಞೆ
ಮಾಡುತ್ತಾರೆ. ಅಲ್ಲಾಹುವೇ ಎಲ್ಲಾ ಎಂದು ನಂಬಿದ್ದ ಇಬ್ರಾಹಿಂ ದೇವರಿಗೆ ತನ್ನ ಮಗನನ್ನು ಬಲಿ ಕೊಡಲು ನಿರ್ಧರಿಸುತ್ತಾರೆ. ಅದರಂತೆ
ಇಸ್ಮಾಯಿಲ್ ಕೂಡ ನಗು ಮೊಗದಿಂದಲೇ ಅಲ್ಲಾಹುವಿನ ಬಲಿ ಸೇರಲು ಸಿದ್ಧನಾಗುತ್ತಾನೆ. ವಿಚಿತ್ರ ಅಂದ್ರೆ ಮಗನನ್ನು ಬಲಿ ಕೊಡಲು
ಅದೆಷ್ಟೂ ಸಲ ಕತ್ತಿಯನ್ನು ಎತ್ತಿ ಕುತ್ತಿಗೆ ಕಡಿದರೂ ದೈವಿ ಶಕ್ತಿಯಿಂದ ಮಗನ ಮೇಲಿಟ್ಟ ಕತ್ತಿ ಹರಿಯುದಿಲ್ಲ.. ಬದಲಾಗಿ ದೇವದೂತ
ಜಿಬ್ರಾಯಿಲ್ ಅಲ್ಲಿ ಪ್ರತ್ಯಕ್ಷರಾಗಿ ಕುರಿಯನ್ನು ಬಲಿ ಕೊಡುವಂತೆ ಆಜ್ಞೆ ಮಾಡುತ್ತಾರೆ. ಹೀಗೆ ಇಬ್ರಾಹಿಂ ಅಲ್ಲಾಹುವಿನ ಸತ್ಯ ನಿಷ್ಠೆಯ
ಪರೀಕ್ಷೆಯಿಂದ ದೇವರಿಗೆ ಮತ್ತೇ ಹತ್ತಿರವಾಗುತ್ತಾರೆ. ಇದೇ ನೆನಪಿಗಾಗಿ ಈ ದಿನವನ್ನು ಸಮಸ್ತ ಮುಸ್ಲಿಮರು ಬಕ್ರೀದ್ ಹಬ್ಬವನ್ನಾಗಿ
ಆಚರಿಸುತ್ತಾರೆ. ಕುರಿಯನ್ನು ಬಲಿ ಕೊಡುವ ಪದ್ದತಿ ಈಗಲೂ ಮುಂದುವರೆದಿದ್ದು, ಬಲಿ ಕೊಟ್ಟ ಆ ಕುರಿಯನ್ನು, ನೆಂಟರಿಗೆ, ಬಡವರಿಗೆ
ಹಂಚಿ ಇಬ್ರಾಹಿಂ ಅವರ ದೈವಾಜ್ಞೆ ಪಾಲನೆಯನ್ನು ನೆನಪಿಸಿ ಏಕತೆ ಮತ್ತು ಭ್ರಾತೃತ್ವದಿಂದ ಬಕ್ರೀದ್ ಹಬ್ಬ ಆಚರಿಸುತ್ತಾರೆ. ಈದ್
ಉಲ್ ಅಝ್ಹಾ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ..