ವರಿದಿ: ಜೀವನ್, ಮಂಗಳೂರು
ಮಂಗಳೂರು, ಎ26(Daijiworld News/SS): ರಾತ್ರಿ ವೇಳೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಬೀದಿ ನಾಯಿಗಳು ವಾಹನ ಅಪಘಾತಗಳಿಗೆ ಒಳಗಾಗಿ ಪ್ರಾಣ ಕಳೆದುಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಪ್ರಾಣಿ ಸಂರಕ್ಷಕ ತೌಸಿಫ್ ಬೀದಿ ನಾಯಿಗಳ ಕೊರಳಿಗೆ ರಿಫ್ಲೆಕ್ಟಿಂಗ್ ಬೆಲ್ಟ್ ಹಾಕುವ ನೂತನ ಕ್ರಮ ಕೈಗೊಂಡಿದ್ದಾರೆ.
ನಗರದಲ್ಲಿ ಹೆಚ್ಚಾಗಿ ಬೀದಿ ನಾಯಿಗಳಿದ್ದು, ರಸ್ತೆಯಲ್ಲಿ ಅರಿವಿಲ್ಲದೇ ಓಡಾಡುತ್ತಿರುತ್ತದೆ. ಈ ವೇಳೆ ಬೀದಿನಾಯಿಗಳು ತಿಳಿದೋ ತಿಳಿಯದೆಯೋ ಅಪಘಾತಗಳಿಗೆ ಒಳಗಾಗಿ ಸಾವನ್ನಪ್ಪುತ್ತದೆ. ಈ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಪ್ರಾಣಿ ಸಂರಕ್ಷಕ ತೌಸಿಫ್ ಬೀದಿ ನಾಯಿಗಳಿಗೆ ಬಣ್ಣದ ಕೊರಳಪಟ್ಟಿ ಹಾಕಲು ( ರಿಫ್ಲೆಕ್ಟಿಂಗ್ ಬೆಲ್ಟ್ ) ನಿರ್ಧರಿಸಿದ್ದಾರೆ.
ಈಗಾಗಲೇ ಬೀದಿನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕಾರಣ ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್ಗೇಟ್ ಪ್ರದೇಶಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ 50 ರಿಫ್ಲೆಕ್ಟರ್ ಬೆಲ್ಟ್ಗಳನ್ನು ನಾಯಿಗಳ ಕೊರಳಿಗೆ ಹಾಕಲಾಗಿದೆ.
ನಗರದಲ್ಲಿ 500ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಈ ಬೆಲ್ಟ್ ಹಾಕಲಾಗಿದ್ದು, ಬೆಲ್ಟ್ ಹಾಕಿರುವ ಕಡೆ ಅಪಘಾತ ಸಂಖ್ಯೆ ಕಡಿಮೆಯಾಗಿದೆ. ಇನ್ನಷ್ಟು ನಾಯಿಗಳಿಗೆ ಅಳವಡಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮತ್ತೆ 100 ಬೆಲ್ಟ್ಗಳನ್ನು ತರಿಸಲಾಗಿದೆ. ಈ ಕಾರ್ಯವನ್ನು ಸದ್ಯ ಉಚಿತವಾಗಿಯೇ ಮಾಡುತ್ತಿದ್ದು, ಮುಂದೆ ಪ್ರಾಯೋಜಕರಿಂದ ಆರ್ಥಿಕ ನೆರವು ಪಡೆಯುವ ಯೋಚನೆಯಿದೆ ಎಂದು ತೌಸಿಫ್ ಹೇಳಿದ್ದಾರೆ.
ಇದೀಗ ತೌಸಿಫ್ ಅವರ ಈ ವಿನೂತನ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ನಾಯಿ ಸಂರಕ್ಷಣೆ ಮಾತ್ರವಲ್ಲ, ಉರಗ ಪ್ರೇಮಿ, ಪಕ್ಷಿ ಪ್ರೇಮಿಯೂ ಆಗಿರುವ ತೌಸಿಫ್ ಪ್ರಾಣಿಗಳ ಆರೈಕೆಯೂ ಮಾಡುತ್ತಾರೆ. ಗಾಯಗೊಂಡ ಪ್ರಾಣಿ, ಪಕ್ಷಿಗಳಿಗೆ ಆರೈಕೆ ಮಾಡುವ ಮಂಗಳೂರಿನ ತೌಸಿಫ್ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.