ಕುಂದಾಪುರ, ಫೆ 10(DaijiworldNews/AK):ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಇಂಗಿತವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶನಿವಾರ ಕುಂದಾಪುರದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಸಂಕೀರ್ಣದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಸರ್ವಿಸ್ ಸೆಂಟರ್ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕದ ಉದ್ಘಾಟನೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿ, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೂ ಮುನ್ನ ಈಗಾಗಲೇ ಇರುವ ಕಾಲೇಜುಗಳ ಅಭಿವೃದ್ಧಿಯ ಕಡೆಗೆ ಆದ್ಯತೆ ನೀಡಲಾಗುತ್ತಿದೆ.
ಬೈಂದೂರು ತಾಲೂಕು ಕೇಂದ್ರವಾಗಿದ್ದರು ಅಲ್ಲಿ ತಾಲೂಕು ಆಸ್ಪತ್ರೆ ಇಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಸಿದ ಸಚಿವರು, ಈಗಾಗಲೇ 48 ಹೊಸ ತಾಲೂಕುಗಳನ್ನು ರಚನೆ ಮಾಡಲಾಗಿದ್ದು ಅದರಲ್ಲೂ 20 ವರ್ಷಗಳ ಹಿಂದೆ ಘೋಷಣೆಯಾಗಿರುವ ಹಳೆಯ ಹೊಸ ತಾಲೂಕುಗಳನ್ನ ಆದ್ಯತೆಯ ಮೇರೆಗೆ ಸದೃಢಗೊಳಿಸಲಾಗುವುದು ಮತ್ತು ಉಳಿದಂತೆ ಮೇಲ್ದರ್ಜೆಗೆ ಏರಿಸುವ ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಾರ್ಕಳದಲ್ಲಿ ಸ್ಥಳೀಯ ಸಮಸ್ಯೆಗಳಿಂದಾಗಿ ವೈದ್ಯರು ಕಾರ್ಕಳದ ತಾಲೂಕು ಆಸ್ಪತ್ರೆಗೆ ಹೋಗಲು ಒಪ್ಪುತಿಲ್ಲ ಇದರ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಲಕ್ಷಾಂತರ ಮಂದಿ ಪ್ರವಾಸಿಗರು ಮತ್ತು ಭಕ್ತರು ಬರುವ ಕೊಲ್ಲೂರಿನಲ್ಲಿ ಆಸ್ಪತ್ರೆ ಸಮಸ್ಯೆ ಇದು ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಇದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಹೊಸತಾಗಿ ಎಂಬಿಬಿಎಸ್ ವೈದ್ಯರನ್ನು ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದ್ದು ಖಾಲಿ ಇರುವ ಹುದ್ದೆಗಳಲ್ಲಿ ಕನಿಷ್ಠ ಒಂದು ವರ್ಷ ಕಡ್ಡಾಯ ಸೇವೆ ಮಾಡುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಬರುವುದಿಲ್ಲ ಎನ್ನುವ ಭರವಸೆ ನೀಡಿದರು.
ಮಂಗನ ಕಾಯಿಲೆ ಎಪ್ರಿಲ್ ತಿಂಗಳ ತನಕ ಹೆಚ್ಚು ಹರಡುವ ಸಾಧ್ಯತೆಯಿದ್ದು ಸಾರ್ವಜನಿಕರು ಈ ರೋಗದಿಂದ ಜಾಗೃತೆ ವಹಿಸಬೇಕು ಎಂದು ಕರೆ ನೀಡಿದರು.
ಅಲ್ಲದೆ ಹಳೆ ವ್ಯಾಕ್ಸಿನ್ ನಿರೂಪಯುಕ್ತವಾಗಿದ್ದು ಹೊಸ ವ್ಯಾಕ್ಸಿನ್ ಸಿದ್ಧಪಡಿಸಲು ಹೈದರಾಬಾದಿನ ಸಂಶೋಧನಾ ಕೇಂದ್ರದ ಜೊತೆ ಮಾತುಕತೆ ನಡೆಸಲಾಗಿದ್ದು ಹೊಸ ವ್ಯಾಕ್ಸಿನ್ ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದರು.
2013ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನುಷ್ಠಾನಕ್ಕೆ ಬಂದಿದ್ದ ಕೆಲವು ಆರೋಗ್ಯ ಕೇಂದ್ರಗಳು ಈಗ ನಿರ್ಜೀವವಾಗಿವೆ ಇದರ ಪುನಶ್ಚೇತನಕ್ಕೆ ಯಾವುದಾದರೂ ಕ್ರಮ ಕೈಗೊಳ್ಳುತ್ತೀರಾ ಎಂದಾಗ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಷ್ಟೇ ಕಳೆದಿದೆ ಹಂತ ಹಂತವಾಗಿ ಅದನ್ನ ಪುನರುಜ್ಜೀವನಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ 800 ಜನ ಫಾರ್ಮಸಿಸ್ಟ್ ಹಾಗೂ ತಾಂತ್ರಿಕ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು ಮುಂದಿನ ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇಪೈಕಿ 500 ರಷ್ಟು ಸಿಬ್ಬಂದಿಗಳು ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಕರಾವಳಿ ಮತ್ತು ಮಲೆನಾಡುಗೆ ಹಾಗೂ 300 ಜನ ಸಿಬ್ಬಂದಿಗಳನ್ನು ಕಲ್ಯಾಣ ಕರ್ನಾಟಕ ರಾಜ್ಯಗಳಿಗೆ ನಿಯುಕ್ತಿಗೊಳಿಸಲಾಗುವುದು ಎಂದರು.
ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದ್ದು ಆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸವಾಲುಗಳಿದ್ದು ಅದನ್ನು ಹಂತ ಹಂತವಾಗಿ ನಿಭಾಯಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಭ್ರಷ್ಟಾಚಾರ ವಿರುದ್ಧದ ತನಿಖೆಗೆ ಪ್ರತಿಕ್ರಿಸಿದ ಸಚಿವರು ಈಗಾಗಲೇ ತನಿಖೆ ಪ್ರಗತಿಯಲ್ಲಿದೆ ಮೈಕಲ್ ದಿಕ್ಕುನ್ನ ಅವರ ನೇತೃತ್ವದಲ್ಲಿ ತನಿಕಾ ಸಮಿತಿ ವಿಚಾರಣೆ ನಡೆಸುತ್ತಿದೆ ಅವರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.