ಕೊಲ್ಲೂರು, ಫೆ 10 (DaijiworldNews/MS): ಬೈಂದೂರು ತಾಲೂಕಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹತ್ತು ವರ್ಷಗಳ ಬಳಿಕ ನಕ್ಸಲರ ಚಲನವಲನ ಪತ್ತೆಯಾದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ (ಎಎನ್ಎಫ್) ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ನಕ್ಸಲರು ಭೇಟಿ ನೀಡಿ ತೆರಳಿದ್ದಾರೆ ಎನ್ನಲಾದ ಮನೆಗಳು, ವ್ಯಕ್ತಿಗಳಿಂದ ಎಎನ್ಎಫ್ ಸಿಬಂದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕೇರಳ ಭಾಗದಲ್ಲಿ ನಕ್ಸಲ್ ರ ವಿರುದ್ದ ನಿರಂತರ ಕಾರ್ಯಾಚರರನೆ ನಡೆಯುತ್ತಿರುವುದುದರಿಂದ ಅವರ ಚಟುವಟಿಕೆಗೆ ತೊಡಕಾದ ಹಿನ್ನಲೆಯಲ್ಲಿ ಅಲ್ಲಿಂದ ತಂಡವು ಕರ್ನಾಟಕ ಪ್ರವೇಶಿಸಿರುವ ಸಾಧ್ಯತೆ ಇದೆ. ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿನ ಬಳಿಕ ವಿಕ್ರಂ ಗೌಡ ನೇತೃತ್ವದ ತಂಡವು ಸದ್ದು ಮಾಡುತ್ತಿದೆ.
ಕೆಲ ವರ್ಷಗಳ ಹಿಂದೆ ಕುಂದಾಪುರದ ಜಡ್ಕಲ್, ಮುದೂರು, ದೇವರಬಾಳು ಪರಿಸರದಲ್ಲಿ ನಕ್ಸಲ್ ತಂಡವು ಕಾಣಿಸಿಕೊಂಡಿತ್ತು.
ಇದೀಗ ಕುಂದಾಪುರ ಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಎನ್ಎಫ್ ತಂಡವನ್ನು ಕೊಲ್ಲೂರು ಸುತ್ತಲಿನ ಸೂಕ್ಷ್ಮ ಪ್ರದೇಶಗಳಿಗೆ ಕಳುಹಿಸಲಾಗಿದೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್ ತಿಳಿಸಿದ್ದಾರೆ.