ಮಂಗಳೂರು, ಫೆ 09 (DaijiworldNews/HR): ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವ ಸತ್ಯಾಂಶವನ್ನ ಶಾಸಕ ಹರೀಶ್ ಪೂಂಜಾ ಅವರು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದರೆ ಏನು ಹೇಳೋದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು’ ಅಭಿಯಾನಕ್ಕೆ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಗುಂಡೂರಾವ್, ರಾಜ್ಯಕ್ಕೆ ಬರುವ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ಧಿಯಾಗಿಲ್ಲ. ಈ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೆಯಲು ಹೊರಟಿರುವುದು ದುರ್ದೈವದ ವಿಚಾರ ಎಂದರು.
ಇನ್ನು ಸ್ವಯತ್ತ ಸಂಸ್ಥೆಯ ಅಧಿಕಾರಿಗಳು ಕೂಡ ಇವರು ಹೇಳಿದಂತೆ ಕೇಳುತ್ತಿದ್ದಾರೆ. ಮುಖ್ಯಮಂತ್ರಿಯನ್ನು ಅರೆಸ್ಟ್ ಮಾಡೋದು, ವಿರೋಧ ಪಕ್ಷಕ್ಕೆ ತೊಂದರೆ ಕೊಡೋದು, ಪತ್ರಕರ್ತರನ್ನು ಜೈಲಿಗೆ ಹಾಕಿಸೋ ಕೆಲಸ ಆಗುತ್ತಿದೆ. ಇದು ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.
ದೇಶದಲ್ಲಿರುವ ತೆರಿಗೆ ಹಣದಲ್ಲಿ ಹಿಂದುಗಳ ಪಾಲು ಎಷ್ಟು? ಇದರಲ್ಲಿ ಹಿಂದುಗಳ ಅಭಿವೃದ್ಧಿಗೆ ಉಪಯೋಗ ಆಗುತ್ತಿರುವುದೆಷ್ಟು ? ಹಿಂದುಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು ಎಂದು ಹರೀಶ್ ಪೂಂಜಾ ಅವರ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.