ಮಂಗಳೂರು,ಫೆ 09 (DaijiworldNews/PC): ಮಂಗಳೂರಿನ ನಾಗುರಿ ಸಮೀಪದಲ್ಲಿ ಫೆ. 6 ರಂದು ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುವ ಸಂಧರ್ಬದಲ್ಲಿ ನೀರಿನ ಪೈಪ್ ಲೈನ್ ಗೆ ಹಾನಿ ಉಂಟಾಗಿದ್ದು ಅದರ ದುರಸ್ತಿ ಕಾಮಗಾರಿ ಇನ್ನೂ ಪೂರ್ಣವಾಗದ ಕಾರಣದಿಂದ ನಗರದ ಅನೇಕ ಮುಖ್ಯ ಭಾಗಗಳಿಗೆ ಫೆ.8 ರಂದು ದಿನಪೂರ್ತಿ ನೀರು ಸರಬರಾಜು ಸ್ಥಗಿತವಾಗಿತ್ತು.
ಫೆ.8 ರಂದು ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು. ವಸತಿ ಸಮುಚ್ಚಯಗಳಿಗೆ ಪೈಪ್ ಲೈನ ಟ್ಯಾಂಕರ್ ಮೂಲಕ ನೀರು ಸರಬರಾಜು ಖಾಸಗಿಯಾಗಿ ನಡೆಸುತ್ತಿರುವುದು ಕಂಡುಬಂತು. ಆದರೆ ಪ್ರತ್ಯೇಕ ಮನೆ ಇದ್ದವರು ನೀರಿಲ್ಲದೆ ಪರದಾಡಿದರು.
ಕೆಲವರಿಗೆ ಟ್ಯಾಂಕರ್ ಬೇಕಿದ್ದರೂ ಸಿಗುತ್ತಿರಲಿಲ್ಲ. ಪಿ.ವಿ.ಎಸ್., ಲೇಡಿಹಿಲ್, ಬಂದರು, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲಬೈಲು, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ ಕೂಳೂರು, ಜಲ್ಲಿಗುಡ್ಡೆ ಕೋಡಿಕಲ್ ಭಾಗಶಃ, ಕಾನ, ಕುಳಾಯಿ, ಮುಕ್ಯ ಪಣಂಬೂರು ಮುಂತಾದ ಪ್ರದೇಶಗಳಲ್ಲಿ ಮೂರು ದಿನಗಳಿಂದ ನೀರು ಲಭಿಸದೆ ಜನರು ಸಮಸ್ಯೆ ಎದುರಿಸುವಂತಾಯಿತು.
ಫೆ.8 ರಂದೂ ದಿನಪೂರ್ತಿ ನೀರು ಲಭ್ಯವಾಗದ ಕಾರಣ ಸದ್ಯದ ಮಾಹಿತಿ ಪ್ರಕಾರ, ಫೆ. 9 ರಿಂದ ನೀರು ಸರಬರಾಜು ಮತ್ತೆ ಆರಂಭವಾಗುವ ಬಗ್ಗೆ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದರೂ ತಗ್ಗು ಪ್ರದೇಶದ ನಿವಾಸಿಗಳಿಗೆ ನೀರು ಸಿಗಲು ಶುಕ್ರವಾರವೂ ಕಾಯಬೇಕಾಗಬಹುದು ಎಂದು ಮಾಹಿತಿ ದೊರಕಿದೆ.
ನಾಗುರಿ ಪೈಪ್ ಲೈನ್ ಹಾನಿಯಾದ ಕಾರಣದಿಂದಾಗಿ ನೀರು ಸೋರಿಕೆಯಾಗಿ ಸಮಸ್ಯೆ ಆಗಿತ್ತು. ಗುರುವಾರ ಪೈಪ್ ಲೈನ್ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಫೆ 9 ರಿಂದ ಮತ್ತೆ ನೀರು ಆರಂಭಿಸಲಾಗುವುದು, ತಗ್ಗು ಪ್ರದೇಶಗಳಿಗೆ ನೀರು ಲಭ್ಯವಾಗಲು ಕೊಂಚ ಸಮಯ ತೆಗೆದುಕೊಳ್ಳಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.