ಸುಬ್ರಹ್ಮಣ್ಯ, ಫೆ 08 (DaijiworldNews/PC): ಕರಾವಳಿಯ ಕುಮಾರ ಪರ್ವತಕ್ಕೆ ಚಾರಣಿಗರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದ್ದು ಆದೇಶ ಉಲ್ಲಂಘಿಸಿದವರಿಗೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.
ಕುಮಾರ ಪರ್ವತ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಿತಾರಣ್ಯಗಳಾಗಿದ್ದು ಇಂತಹ ಕಡೆ ಜನ ಸಂಚರಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಲವರು ಅಲ್ಲಿಯೇ ಟೆಂಟ್ ಹಾಕಿ ಉಳಿಯುತ್ತಿರುವುದು ಅಲ್ಲಿರುವ ಸಾವಿರಾರು ಅಪರೂಪದ ಜೀವ ಸಂಕುಲಕ್ಕೆ ಇದು ಮಾರಕವಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪರಿಸರಕ್ಕೆ ಮಾರಕವಾಗದಂತೆ ನಿರ್ಧಾರ ಕೈಗೊಳ್ಳಲಿದೆ.
ವಾರಾಂತ್ಯದಲ್ಲಿ ಸುಮಾರು 400 ರಿಂದ 500 ಮಂದಿ ಭೇಟಿ ನೀಡುತ್ತಿದ್ದು ಈ ಪರ್ವತಕ್ಕೆ ವಾರಗಳ ಹಿಂದೆ ಸುಬ್ರಹ್ಮಣ್ಯದ ಮೂಲಕ ಸಾವಿರಾರು ಮಂದಿ ಹೋಗಿದ್ದು ಇದರಿಂದ ಟಿಕೆಟ್ ಕೌಂಟರ್ನಲ್ಲಿ ನೂಕು ನುಗ್ಗಲು ಉಂಟಾದ ವೀಡಿಯೋ ವೈರಲ್ ಆಗಿತ್ತು. ಈ ವಿಚಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ಬಂದು ರಾಜ್ಯದ ಎಲ್ಲಾ ಟ್ರಕ್ಕಿಂಗ್ ಪಾಯಿಂಟ್ಗಳಲ್ಲಿಯೂ ಎಸ್ಒಪಿ ರೂಪಿಸುವ ಅಗತ್ಯವಿದ್ದು, ಅಲ್ಲಿಯವರೆಗೂ ಅನ್ಲೈನ್ ಬುಕ್ಕಿಂಗ್ ಇಲ್ಲದ ತಾಣಗಳಲ್ಲಿ ಟ್ರಕ್ಕಿಂಗ್ ನಿರ್ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಇದೀಗ ಕುಮಾರ ಪರ್ವತ ಪ್ರವೇಶ ಸ್ಥಳದಲ್ಲೂ ಅರಣ್ಯ ಇಲಾಖೆ ಪ್ರವಾಸಿಗರ ಎಂಟ್ರಿಗೆ ನಿರ್ಬಂಧ ವಿಧಿಸಿರುವ ಬ್ಯಾನರ್ ಅಳವಡಿಸಿದೆ.
ಕುಮಾರ ಪರ್ವತದಲ್ಲಿ ಅರಣ್ಯ, ಹುಲ್ಲುಗಾವಲು ಸಂಪೂರ್ಣವಾಗಿ ಒಣಗಿರುವುದರಿಂದ ಈ ಅವಧಿಯಲ್ಲಿ ವನ್ಯಧಾಮದೊಳಗೆ ಸಾರ್ವಜನಿಕರು ಪ್ರವೇಶಿಸಿ ಚಟುವಟಿಕೆ ನಡೆಸಿದರೆ ವನ್ಯಧಾಮಕ್ಕೆ ಬೆಂಕಿ ಬೀಳುವ ಸಾಧ್ಯತೆ ಮತ್ತು ಚಾರಣಿಗರಿಗೂ ಅಪಾಯ ಇದೆ ಎಂಬ ಕಾರಣಕ್ಕಾಗಿ ಪ್ರವಾಸಿಗರಿಗೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.