ಮಂಗಳೂರು, ಫೆ 08 (DaijiworldNews/MS): ಷೇರುಗಳಲ್ಲಿ ಹೂಡಿಕೆ ಹೆಸರಿನಲ್ಲಿ ನಾಲ್ವರಿಂದ 57.46 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ನಗರದ ಸೆನ್ (ಸೈಬರ್, ನಾರ್ಕೊಟಿಕ್ ಮತ್ತು ಆರ್ಥಿಕ ಅಪರಾಧ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ನಿಶ್ಚಿತ್ ಡಿಸೋಜ, ಲ್ಯಾನ್ಸಲ್ ಡಿಸೋಜ, ನಮಿತಾ ಡಿಸೋಜ ಮತ್ತು ಅಮರ್ ರಾವ್ ವಂಚನೆಗೊಳಗಾದವರು.
ಅಪರಿಚಿತ ವ್ಯಕ್ತಿಯೋರ್ವ ನಿಶ್ಚಿತ್ ಎಂಬವರಿಗೆ ಕರೆ ಮಾಡಿದ್ದು, pantheon grop uk ಕಂಪೆನಿಯೊಂದರ ಷೇರುಗಳನ್ನು ಖರೀದಿಸುವಂತೆ ಸೂಚಿಸಿ ಆಂಡ್ರಾಯಿಡ್ ಅಪ್ಲಿಕೇಷನ್ ಇನ್ಸ್ಟಾಲ್ ಮಾಡುವಂತೆ ಹೇಳಿ ಲಿಂಕೊಂದನ್ನು ಕಳುಹಿಸಿದ್ದ. ತಾನು ಆ್ಯಪನ್ನು ಡೌನ್ಲೋಡ್ ಮಾಡಿ ಲಾಗಿನ್ ಆಗಿ ಡಿ.18ರಿಂದ ಜ.23ರ ಅವಧಿಯಲ್ಲಿ 32.71 ಲ.ರೂ., ತನ್ನ ಸ್ನೇಹಿತರಾದ ಲ್ಯಾನ್ಸಲ್ ಡಿಸೋಜ 8 ಲ.ರೂ, ನಮಿತಾ ಡಿಸೋಜ 12 ಲ.ರೂ ಮತ್ತು ಅಮರ್ ರಾವ್ 4,75,000 ರೂ.ಗಳನ್ನು ಹಂತ ಹಂತವಾಗಿ ಹೂಡಿಕೆ ಮಾಡಿದ್ದೆವು. ಕೆಲವು ಸಮಯದ ಬಳಿಕ ಹಣವನ್ನು ವಿತ್ಡ್ರಾ ಮಾಡಲು ಯತ್ನಿಸಿದಾಗ ವಿತ್ಡ್ರಾ ಆಗಲಿಲ್ಲ. ಆವಾಗ ತನಗೆ ಇದೊಂದು ಮೋಸದ ಜಾಲ ಎಂಬುದು ಗೊತ್ತಾಗಿದೆ ಎಂದು ನಿಶ್ಚಿತ್ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.