ಮಂಗಳೂರು,ಏ24(Daijiworld News/AZM):ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನಲೆ ಕರಾವಳಿಯಲ್ಲೂ ಪೊಲೀಸರು ಕಟ್ಟೆಚ್ಚರವಹಿಸಿದ್ದು, ಕರಾವಳಿಯಾದ್ಯಂತ ತೀವ್ರ ನಿಗಾವಹಿಸಬೇಕೆಂದು ಮಂಗಳೂರು ಪೊಲೀಸ್ ಕಮೀಷನರ್ ಆಗಿರುವ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇಂದು ಮಂಗಳೂರಿನ ಕಮೀಷನರೇಟ್ ಆಫೀಸ್ ನಲ್ಲಿ ನಡೆದ ಪೊಲೀಸ್ ಸಿಬ್ಬಂದಿಗಳ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲದೆ ಎಮ್ ಆರ್ ಪಿ ಎಲ್, ಎನ್ ಎಮ್ ಪಿಟಿ, ಮಂಗಳೂರು ವಿಮಾನ ನಿಲ್ದಾಣ, ಇನ್ಫೋಸಿಸ್ ಹಾಗೂ ಮಾಲ್ ಗಳಲ್ಲೂ ತೀವ್ರ ನಿಗಾವಹಿಸಬೇಕು ಹಾಗೂ ಕಟ್ಟೆಚ್ಚರ ಸ್ಥಿತಿಯಲ್ಲಿರಬೇಕಿದ್ದು, ಇಂತಹ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್ ಹಾಗೂ ಇತರ ಕೆಲಸಗಾರರು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟನ್ನು ಪಡೆಯಬೇಕಾಗಿದೆ ಎಂದು ಪೊಲೀಸ್ ಕಮೀಷನರ್ ಸೂಚನೆ ನೀಡಿದ್ದಾರೆ.
ಈ ಸಂದರ್ಭ ವಿವಿಧ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶ್ರೀಲಂಕಾ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಕಳೆದ ತಿಂಗಳು ಎರಡು ಮಸೀದಿಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಹಿನ್ನಲೆ ಕರಾವಳಿಯಲ್ಲೂ ಪೊಲೀಸ್ ಪಡೆ ತೀವ್ರ ಕಟ್ಟೆಚ್ಚರ ಕ್ರಮಗಳನ್ನು ಕೈಗೊಂಡಿದೆ.