ಮಂಗಳೂರು, ಫೆ 06 (DaijiworldNews/HR): 1994 ರಲ್ಲಿ ವಾಮಂಜೂರಿನಲ್ಲಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡಿರುವ ಪ್ರವೀಣ್ ಕುಮಾರ್(60)ನಿಂದ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸಬೇಕು ಎಂದು ಆತನ ಕುಟುಂಬಸ್ಥರು ಪೊಲೀಸರು ಹಾಗೂ ಸರಕಾರಕ್ಕೆ ಮತ್ತೊಮ್ಮೆ ಮೊರೆ ಹೋಗಿದ್ದಾರೆ.
ಪ್ರವೀಣ್ನನ್ನು ಕಳೆದ ಮೇ ತಿಂಗಳಿನಲ್ಲಿ ಸನ್ನಡತೆಯ ಕಾರಣ ನೀಡಿ ಬಿಡುಗಡೆ ಮಾಡಿರುವ ಮಾಹಿತಿ ಬಂದಿತ್ತು. ಬಳಿಕ ನ.7ರಂದು ರಾತ್ರಿ ಆತ ತಮ್ಮನಿಗೆ ಕರೆ ಮಾಡಿ ಜೀವಬೆದರಿಕೆ ಹಾಕಿದ್ದ. ಹಾಗಾಗಿ ನಾವು ಜೀವಭಯದಿಂದ ಇದ್ದೇವೆ. ಪೊಲೀಸರು ಆತನ ಚಲನವಲನಗಳನ್ನು ನಿತ್ಯವೂ ಗಮನಿಸಬೇಕು. ದ.ಕ ಜಿಲ್ಲೆಗೆ ಬರದಂತೆ ಗಡೀಪಾರು ಮಾಡಬೇಕು ಎಂದು ಕುಟುಂಬಸ್ಥರು ಮಂಗ ಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನು ಪ್ರವೀಣ ಬಿಡುಗಡೆಯಾಗಲಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ 2022ರಲ್ಲಿ ಪೊಲೀಸ್ ಆಯುಕ್ತರು, ಗೃಹಸಚಿವರು, ರಾಜ್ಯಪಾಲರಿಗೆ ಮನವಿ ಮಾಡಿ ಬಿಡುಗಡೆ ಮಾಡದಂತೆ ಕೇಳಿಕೊಂಡಿದ್ದೆವು. ಆತನ ಪತ್ನಿಯೂ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದಳು. ಆದರೆ ಪ್ರಯೋಜನ ವಾಗಲಿಲ್ಲ. ಆ ಬಳಿಕ ಬಿಡುಗಡೆಯ ಸುದ್ದಿ ತಿಳಿದ ಕೂಡಲೇ ಮತ್ತೂಮ್ಮೆ ರಕ್ಷಣೆಗಾಗಿ ಮನವಿ ಮಾಡಿದ್ದೆವು ಎಂದು ಹೇಳಿದರು.
ಪ್ರವೀಣ್ ತನ್ನ ತಮ್ಮನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾಗಲೂ ಪೊಲೀಸರಿಗೆ ತಿಳಿಸಿದ್ದೇವೆ. ಆದರೆ ಪೊಲೀಸರಿಂದ ಸ್ಪಂದನೆ ಸಿಕ್ಕಿಲ್ಲ. ಕುಟುಂಬಸ್ಥರ ಮನೆಗೆ ಪೊಲೀಸರು ಇದುವರೆಗೂ ಭೇಟಿ ನೀಡಿಲ್ಲ. ತನ್ನ ಸಂಬಂಧಿಕರನ್ನೇ ಕೊಲೆ ಮಾಡಿದ್ದ ಆತ ಯಾವುದೇ ಕೃತ್ಯ ಮಾಡಲು ಹಿಂಜರಿಯುವವನಲ್ಲ. ದ್ವೇಷ ಸಾಧಿಸುವ ಆತಂಕವೂ ಇದೆ. ಕುಟುಂಬದಲ್ಲಿ ಹಲವರು ಹಿರಿಯ ನಾಗರಿಕರಿದ್ದಾರೆ. ಹಾಗಾಗಿ ಪೊಲೀಸರು ನಮಗೆ ರಕ್ಷಣೆ ನೀಡ ಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಪ್ರವೀಣ್ ಮೂಲತಃ ಉಪ್ಪಿನಂಗಡಿಯವ ನಾಗಿದ್ದರೂ ಹೆಚ್ಚಾಗಿ ವಾಮಂಜೂರಿ ನಲ್ಲಿ ತನ್ನ ಅತ್ತೆಯ ಮನೆಯಲ್ಲೇ ವಾಸವಾಗಿದ್ದ. ಮಂಗಳೂರಿನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ. 1994ರ ಫೆ.23ರ ರಾತ್ರಿ ವಾಮಂಜೂರಿನ ಮನೆಗೆ ಬಂದಿದ್ದ. ಆಗ ಕಳ್ಳರ ಹಾವಳಿ ಹೆಚ್ಚಾಗಿದ್ದ ಕಾಲ. ಮನೆಯಲ್ಲಿದ್ದ ಆತ ತಮ್ಮ ರಕ್ಷಣೆಗೆ ಇದ್ದಾನೆಂದು ಮನೆಯವರು ಭಾವಿಸಿದ್ದರು. ಆದರೆ ಕುಡಿತ, ಜೂಜಿನ ಚಟ ಹೊಂದಿದ್ದ ಪ್ರವೀಣ್ ಮನೆಯಲ್ಲಿದ್ದ ನಾಲ್ವರು ತನ್ನ ಸಂಬಂಧಿಕರನ್ನೇ ಕತ್ತಿಯಿಂದ ಹೊಡೆದು ಕೊಲೆ ಮಾಡಿ ಚಿನ್ನ, ಹಣ ದೋಚಿ ಪರಾರಿಯಾಗಿದ್ದ.