ಮಂಗಳೂರು, ಫೆ 6(DaijiworldNews/SK): ಬೇಸಿಗೆ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಇಲಾಖೆಯು ಕ್ರಮಗಳನ್ನು ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ನಡೆದ ಮೆಸ್ಕಾಂ ಕೆಪಿಟಿಸಿಎಲ್ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಿದ್ದ ಕಾರಣ ಸರ್ಕಾರ 4-5 ವರ್ಷಗಳಿಂದ ವಿದ್ಯುತ್ ಖರೀದಿ ಮಾಡಿರಲಿಲ್ಲ. ಆದರೆ, ಈ ವರ್ಷ ಮಳೆ ಕೊರೆತೆಯಿಂದಾಗಿ ಬೇಡಿಕೆ ಹೆಚ್ಚಾಗಿದೆ ಎಂದರು.
ಪ್ರತಿಕೂಲ ಹವಾಮಾನದಿಂದಲೂ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಹೊಡೆತ ಬಿದ್ದಿದೆ. ಇದಲ್ಲದೆ, ಕಲ್ಲಿದ್ದಲು ಗಣಿಗಾರಿಕೆ ಪ್ರದೇಶಗಳಲ್ಲಿ ಮಳೆಯಿಂದಾಗಿ ರಾಜ್ಯವು ಗುಣಮಟ್ಟದ ಕಲ್ಲಿದ್ದಲು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇಸಿಗೆಯಲ್ಲಿನ ವಿದ್ಯುತ್ ಅಗತ್ಯವನ್ನು ಪೂರೈಸಲು, ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಶೀಘ್ರದಲ್ಲೇ ಟೆಂಡರ್ಗಳನ್ನು ಕರೆಯಲಾಗುವುದು ಎಂದ ಹೇಳಿದರು.
ಕರ್ನಾಟಕವು ಈಗಾಗಲೇ ಉತ್ತರ ಪ್ರದೇಶ ಮತ್ತು ಪಂಜಾಬ್ನೊಂದಿಗೆ ಬಾರ್ಟರ್ ವ್ಯವಸ್ಥೆಯಡಿ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ದೆಹಲಿಗೆ ಹಂಚಿಕೆಯಾಗಿದ್ದ ಕೂಡ್ಲಿಗಿಯ ಕೇಂದ್ರ ಗ್ರಿಡ್ನಿಂದ ಕರ್ನಾಟಕಕ್ಕೂ 100 ಮೆಗಾವ್ಯಾಟ್ ವಿದ್ಯುತ್ ಸಿಗಲಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ 6,000 ಲೈನ್ಮನ್ಗಳನ್ನು ನೇಮಕ ಮಾಡಲು ಇಂಧನ ಇಲಾಖೆ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 3,000 ಮಂದಿಯನ್ನು ನೇಮಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಹೊಸದಾಗಿ ನೇಮಕಗೊಂಡವರು ಸ್ವಗ್ರಾಮಕ್ಕೆ ವರ್ಗಾವಣೆ ಬಯಸಿ ಬರುವುದನ್ನು ತಡೆಯಲು ಇಲಾಖೆಯಿಂದ ಅದೇ ದಿನ ರಾಜ್ಯಾದ್ಯಂತ ಸಂದರ್ಶನ ನಡೆಸಲಾಗುವುದು. ಮಂಗಳೂರು ಸೇರಿ ಹಲವೆಡೆ ಸಿಬ್ಬಂದಿಗಳ ಕೊರತೆಯಿದ್ದು, ಇಲಾಖೆಯು ಯುವಕರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಒದಗಿಸಲಿದೆ ಎಂದು ಹೇಳಿದರು.