ಉಡುಪಿ, ಫೆ 05 (DaijiworldNews/HR): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಜನ ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಜ್ಯದ ಇಂಧನ ಸಚಿವ ಕೆಜೆ ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು "ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿರೋದು ನಿಜ. ನಾವು ಈ ವಿರುದ್ಧ ಫೆ. 7ರಂದು ಪ್ರತಿಭಟನೆ ಮಾಡುತ್ತೇವೆ. ತೆರಿಗೆ ವಿಚಾರದಲ್ಲಿ ಮಾತ್ರ ಬರದಲ್ಲೂ ಅನ್ಯಾಯ ಆಗಿದೆ.ವರದಿ ಸಿದ್ಧಮಾಡಿ ಸಲ್ಲಿಕೆ ಮಾಡಿದರೂ ಒಂದು ಸಭೆ ಕರೆದಿಲ್ಲ. ಕೋಟ ಶ್ರೀನಿವಾಸ ಪೂಜಾರಿಗೆ ಮಾಹಿತಿ ಇದ್ದಂತಿಲ್ಲ. ರಾಜ್ಯ ಸರಕಾರದಿಂದ ಈಗಾಗಲೇ ನಮ್ಮ ಕೈಲಾದಷ್ಟು ಬಿಡುಗಡೆ ಮಾಡಿ ಹಂಚಿದ್ದೇವೆ. ನಾವು ಕೊಟ್ಟ ತೆರಿಗೆಯಲ್ಲಿ ಸಹಾಯ ಕೇಳುತ್ತಿದ್ದೇವೆ. ನಿಯಮ ಪ್ರಕಾರ ಅನುದಾನ ಬಿಡುಗಡೆ ಮಾಡಲಿ. ಬಿಜೆಪಿ ಎಂಪಿಗಳು, ಕೇಂದ್ರ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿಸಲಿ. ನಮಗೆ ಮಾತ್ರನಾ? ನಿಮಗೂ ಜನ ಓಟು ಕೊಟ್ಟಿಲ್ವಾ? ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಸಂಸದರಿಗೆ ಭಯ. ಮೋದಿ , ಗೃಹ ಸಚಿವರ ಮುಂದೆ ನಿಂತು ಕೇಳುವ ಧೈರ್ಯ ಸ್ಥೈರ್ಯ ಕಡಿಮೆ ಇದ್ದಾಗೆ ಕಾಣ್ತದೆ" ಎಂದು ಕಿಡಿಕಾರಿದರು.
ಲೋಕಸಭಾ ಚುನವಣಾ ತಯಾರಿ ಕುರಿತು ಮಾತನಾಡಿದ ಸಚಿವರು "ಕಾಂಗ್ರೆಸ್ ಚುನಾವಣೆ ತಯಾರು ಆಗುವ ಪಕ್ಷ ಅಲ್ಲ, ಸತತ ಜನರ ನಡುವೆ ನಾವಿದ್ದು ಚುನಾವಣೆ ಎದುರಿಸ್ತೇವೆ. ಜನರಿಗೆ ಪಕ್ಷ ಕೊಟ್ಟ ಭರವಸೆ ಈಡೇರಿಸಲಾಗಿದೆ" ಎಂದರು.
ಉಡುಪಿಯಲ್ಲಿ ಹಿರಿಯ ನಾಯಕ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಕದಷ ಸೇರುವ ವಿಚಾರದ ಕುರಿತು ಮಾತನಾಡಿದ ಕೆಜೆ ಜಾರ್ಜ್ " ಜಯಪ್ರಕಾಶ್ ಹೆಗ್ಡೆ ಪಕ್ಷ ಸೇರ್ಪಡೆ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ಚುನಾವಣೆ ಪೂರ್ವ ಸಿದ್ಧತೆಗಾಗಿ ನಾನು ಬಂದಿದ್ದೇನೆ. ಕರಾವಳಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು ಜನ ನಮ್ಮಜೊತೆ ಇದ್ದರು. ಕೆಲವೊಂದು ಕಾರಣದಿಂದ ಬಿಜೆಪಿ ಜೊತೆ ಹೋಗಿರಬಹುದು. ನಂಬಿಕೆ ಇದೆ ಜನ ನಮ್ಮ ಕೈಹಿಡಿಯುತ್ತಾರೆಂಬ ಆತ್ಮವಿಶ್ವಾಸ ಇದೆ" ಎಂದರು.